ಶಿವಮೊಗ್ಗ: ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಾಗರ ಕ್ಷೇತ್ರದ ಜನಪ್ರಿಯ ಶಾಸಕರಾದ ಗೋಪಾಲಕೃಷ್ಣ ಬೇಲೂರು ಅವರಿಗೆ ಕಡ್ಡಾಯವಾಗಿ ಸಚಿವ ಸ್ಥಾನ ನೀಡಬೇಕೆಂದು ಸಾಗರದ ಕಾಂಗ್ರೆಸ್ ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಗುಡ್ಡೇಮನೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶಾಸಕರಿಗೆ ಸಚಿವ ಸ್ಥಾನ ಸಿಗಲೆಂದು ಹಾರೈಸಿ ಇಂದು ಅವರು ಸಾಗರದ ಇತಿಹಾಸ ಪ್ರಸಿದ್ಧ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನಮ್ಮ ಶಾಸಕರು ಮೂರು ಬಾರಿ ಜನಪ್ರಿಯ ಶಾಸಕರಾಗಿ ಆಯ್ಕೆಯಾಗಿದ್ದು, ಸದಾ ಜನರೊಂದಿಗೆ ಇದ್ದು ಕೆಲಸ ಮಾಡಿದ್ದಾರೆ. ಈ ಹಿಂದಿನ ಸಚಿವ ಸಂಪುಟಗಳ ರಚನೆಯಲ್ಲಿ ಬೇರೆಯವರಿಗೆ ಸಚಿವರಾಗಲು ಅವರು ಸಹಕಾರ ನೀಡಿದ್ದಾರೆ. ಅದೇ ರೀತಿ ಈಗ ಶಿವಮೊಗ್ಗ ಜಿಲ್ಲೆಯಿಂದ ಗೆದ್ದಿರುವ ಇತರ ಶಾಸಕರು ಹಾಗೂ ಪಕ್ಷದ ಹಿರಿಯರು ಬೇಲೂರು ಅವರಿಗೆ ಸಚಿವ ಸ್ಥಾನ ನೀಡಲು ಬೆಂಬಲ ಸೂಚಿಸಬೇಕು” ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಒಂದು ವೇಳೆ ನಮ್ಮ ಶಾಸಕರಿಗೆ ಸಚಿವ ಸ್ಥಾನ ನೀಡದಿದ್ದರೆ, ಮುಂಬರುವ ದಿನಗಳಲ್ಲಿ ಸಾಗರ ಕಾಂಗ್ರೆಸ್ ವತಿಯಿಂದ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಗುಡುಗಿದ್ದಾರೆ.
ಜೂನ್ 3 ರಂದು ಡಿ.ಕೆ. ಶಿವಕುಮಾರ್ ಪದಗ್ರಹಣದ ಸಂಭ್ರಮಾಚರಣೆ
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಜೂನ್ 3 ರಂದು ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪದಗ್ರಹಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದು ಸಂಜೆ 4:30 ಕ್ಕೆ ಸಾಗರದ ಮಾರಿಗುಡಿ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಪಕ್ಷದ ವತಿಯಿಂದ ವಿಜಯೋತ್ಸವ ಆಚರಿಸಲಾಗುವುದು. ಈ ಕಾರ್ಯಕ್ರಮಕ್ಕೆ ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖ ಭವ್ಯ ಕೃಷ್ಣ ಮೂರ್ತಿ, ಚಿನ್ಮಯ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ನಾಗರಾಜ್ ಕಲ್ಮನೆ, ಉಷಾ, ಚಂದ್ರಣ್ಣ ಸೇರಿದಂತೆ ಇತರೆ ಕಾರ್ಯಕರ್ತರು ಉಪಸ್ಥಿತರಿದ್ದರು.








