ಬೆಂಗಳೂರು : ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪಟ್ಟಾಭಿಷೇಕದ ಬೆನ್ನಲ್ಲೇ ಇದೀಗ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆಯ ಕಸರತ್ತು ತೀವ್ರಗೊಂಡಿದೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಮತ್ತು ಯಾರನ್ನು ಕೈಬಿಡಬೇಕು ಎನ್ನುವುದು ಕಾಂಗ್ರೆಸ್ ಹೈಕಮಾಂಡ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆಡಳಿತ ಪಕ್ಷದಲ್ಲಿ ಸಚಿವ ಸ್ಥಾನಕ್ಕಾಗಿ ಒಳಗೊಳಗೇ ಭಾರಿ ಪೈಪೋಟಿ ಶುರುವಾಗಿದೆ.
ಈಗಾಗಲೇ ಪಕ್ಷದಲ್ಲಿರುವ ಹಿರಿಯ ನಾಯಕರು ಹಾಗೂ ಮೂರರಿಂದ ನಾಲ್ಕು ಬಾರಿ ಸತತವಾಗಿ ಗೆದ್ದು ಬಂದಿರುವ ಶಾಸಕರು ಸಚಿವ ಸ್ಥಾನಕ್ಕಾಗಿ ತೀವ್ರ ಕಸರತ್ತು ನಡೆಸುತ್ತಿದ್ದಾರೆ. ತಮಗೆ ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ಸಿಗಲೇಬೇಕು ಎಂದು ಹೈಕಮಾಂಡ್ ನಾಯಕರ ಮೇಲೆ ಒತ್ತಡ ಹೇರುತ್ತಿದ್ದು, ರಾಜಧಾನಿ ಬೆಂಗಳೂರಿನಿಂದ ದೆಹಲಿಯವರೆಗೂ ಲಾಬಿ ತಲುಪಿದೆ.
ವಿಧಾನಸಭೆ ಶಾಸಕರಷ್ಟೇ ಅಲ್ಲದೆ, ಇದೀಗ ವಿಧಾನ ಪರಿಷತ್ ಸದಸ್ಯರು (ಎಂಎಲ್ಸಿ) ಸಹ ತಮಗೂ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಪರಿಷತ್ ಸದಸ್ಯರ ಕೋಟಾದಡಿ ಕನಿಷ್ಠ ಮೂರು ಸಚಿವ ಸ್ಥಾನಗಳನ್ನು ನೀಡಬೇಕು ಎಂದು ಎಂಎಲ್ಸಿಗಳು ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇದು ಸದ್ಯದ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.
ಇವೆಲ್ಲದರ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಯತೀಂದ್ರ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಹೈಕಮಾಂಡ್ ಸಿದ್ದರಾಮಯ್ಯ ಅವರ ಬಣವನ್ನು ತೃಪ್ತಿಪಡಿಸಲು ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮತ್ತೊಂದೆಡೆ, ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಯುವ ಕಾಂಗ್ರೆಸ್ ಕೋಟಾದಡಿ ಯುವಕರಿಗೆ ಆದ್ಯತೆ ನೀಡಬೇಕು ಎಂದು ಹೈಕಮಾಂಡ್ ತಲುಪಿದ್ದಾರೆ. ಕೇರಳ ಮಾದರಿಯನ್ನು ಅನುಸರಿಸಿ ಯುವ ಕಾಂಗ್ರೆಸ್ ನಾಯಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಈ ಕೋಟಾದಡಿ ಡಿ.ಕೆ. ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಯುವ ನಾಯಕ ಬಸನಗೌಡ ಬಾದರ್ಲಿ ಅವರ ಹೆಸರು ಮುಂಚೂಣಿಗೆ ಬಂದಿದೆ.
ಇದೇ ವೇಳೆ, ಹಾಲಿ ಸಚಿವರಾಗಿರುವ ಎನ್.ಎಸ್. ಬೋಸರಾಜು ಅವರು ಹೈಕಮಾಂಡ್ ಮಟ್ಟದಲ್ಲಿ ಭಾರಿ ಲಾಬಿ ನಡೆಸುತ್ತಿದ್ದಾರೆ. ತಮ್ಮನ್ನು ಸಚಿವ ಸ್ಥಾನದಲ್ಲಿ ಮುಂದುವರಿಸಬೇಕು ಎಂದು ಅವರು ದೆಹಲಿ ನಾಯಕರ ಮೂಲಕ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿರುವುದು ಕಾಂಗ್ರೆಸ್ ಹೈಕಮಾಂಡ್ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.








