ಬೆಳಗಾವಿ: ʻಕರುನಾಡ ಕುರುಬಗೌಡ್ರು ಹಾಗೂ ಬಂಡಾಯ ಧ್ವನಿʼ ಎಂಬ ನಕಲಿ ಫೇಸ್ಬುಕ್ ಖಾತೆಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಲ್ಮೀಕಿ ಸಮಾಜದ ಮುಖಂಡ ರಾಜಶೇಖರ ತಳವಾರ ಎಂಬವರು ದೂರು ದಾಖಲಿಸಿದ್ದಾರೆ. ʻಕರುನಾಡ ಕುರುಬಗೌಡ್ರು ಹಾಗೂ ಬಂಡಾಯ ಧ್ವನಿʼ ಎಂಬ ನಕಲಿ ಫೇಸ್ ಬುಕ್ ಖಾತೆಯಲ್ಲಿ “ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಅವರ ವಿರುದ್ದ 37 ಶಾಸಕರಿಂದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಹಿ ಸಂಗ್ರಹ ಮಾಡಲಾಗಿದೆ” ಎಂಬ ಗಂಭೀರ ಆರೋಪ ಮಾಡಲಾಗಿದೆ. ರಾಜಕೀಯ ವಲಯದಲ್ಲಿ ಇದು ದೊಡ್ಡ ಮಟ್ಟದ ಚರ್ಚೆ ಹುಟ್ಟು ಹಾಕಿತ್ತು.
ಆದರೆ, ಈ ಆರೋಪವನ್ನು ಸ್ವತಃ ಮಾಜಿ ಸಚಿವ ಸತೀಶ್ ಜಾರಕಿಹೊಳಿ ನಿರಾಕರಿಸಿದ್ದರು. ಹೀಗಾಗಿ ಸತೀಶ್ ಅವರ ವಿರುದ್ಧ ಇಲ್ಲಸಲ್ಲದ ಅಪವಾದ ಹೊರಿಸಿ ಅವರ ಹೆಸರು ಹಾಳು ಮಾಡಲು ನಕಲಿ ಫೇಸ್ಬುಕ್ ಖಾತೆಯಲ್ಲಿ ಸಂಚು ರೂಪಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೂರನ್ನು ಸ್ವೀಕರಿಸಿರುವ ಬೆಳಗಾವಿ ಸಿಇಎನ್ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.








