ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಉಪಮುಖ್ಯಮಂತ್ರಿ (ಡಿಸಿಎಂ) ಹೆಚ್ಚುವರಿ ಹುದ್ದೆಗಳ ಸೃಷ್ಟಿ ಮತ್ತು ಹಂಚಿಕೆಯ ಕಗ್ಗಂಟು ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿದ್ದು, ಇದೀಗ ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಲೋಕಸಭೆ ಚುನಾವಣೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಡಿಸಿಎಂ ಹುದ್ದೆಗಾಗಿ ಆಂತರಿಕ ಬೇಡಿಕೆಗಳು ತೀವ್ರಗೊಂಡಿದ್ದು, ಪ್ರಬಲ ಆಕಾಂಕ್ಷಿಗಳನ್ನು ಸಮಾಧಾನಪಡಿಸಲು ಹೈಕಮಾಂಡ್ ನಡೆಸಿದ ಕಸರತ್ತುಗಳು ಸದ್ಯಕ್ಕೆ ಕೈಗೂಡಿದಂತೆ ಕಾಣುತ್ತಿಲ್ಲ.
ವಿಶೇಷವಾಗಿ ಹಿರಿಯ ನಾಯಕ ಹಾಗೂ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಸಮಾಧಾನಪಡಿಸಲು ಕಾಂಗ್ರೆಸ್ ಹೈಕಮಾಂಡ್ ಸಂಧಾನ ಸೂತ್ರವೊಂದನ್ನು ಮುಂದಿಟ್ಟಿತ್ತು. ಪರಮೇಶ್ವರ್ ಅವರಿಗೆ ಎರಡು ಪ್ರಮುಖ ಆಫರ್ ನಡಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಥವಾ ವಿಧಾನಸಭೆ ಸ್ಪೀಕರ್ ಹುದ್ದೆಯನ್ನು ವಹಿಸಿಕೊಳ್ಳುವಂತೆ ಹೈಕಮಾಂಡ್ ನಾಯಕರು ಪ್ರಸ್ತಾಪಿಸಿದ್ದರು. ಆದರೆ, ಈ ಎರಡೂ ಆಫರ್‌ಗಳನ್ನು ಜಿ. ಪರಮೇಶ್ವರ್ ಅವರು ನೇರವಾಗಿಯೇ ತಿರಸ್ಕರಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಹೈಕಮಾಂಡ್ ನೀಡಿದ ಆಫರ್‌ಗಳಿಗೆ ಪ್ರತಿಕ್ರಿಯಿಸಿರುವ ಜಿ. ಪರಮೇಶ್ವರ್, “ಕಳೆದ ಅವಧಿಯಲ್ಲಿ ಈಗಾಗಲೇ ಸತತವಾಗಿ 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷನಾಗಿ ಸಮರ್ಥವಾಗಿ ಜವಾಬ್ದಾರಿ ನಿಭಾಯಿಸಿದ್ದೇನೆ, ಅದು ನನಗೆ ಸಾಕಾಗಿದೆ. ಇನ್ನು ಸ್ಪೀಕರ್ ಸ್ಥಾನ ವಹಿಸಿಕೊಳ್ಳಲು ನನಗೆ ಆಸಕ್ತಿಯಿಲ್ಲ” ಎಂದು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಹೈಕಮಾಂಡ್‌ನ ಪ್ರಾಥಮಿಕ ಸಂಧಾನ ಯತ್ನ ವಿಫಲವಾದಂತಾಗಿದೆ.
ಇದೇ ಸಂದರ್ಭದಲ್ಲಿ ಹೈಕಮಾಂಡ್ ನಾಯಕರ ಮುಂದೆ ಪರಮೇಶ್ವರ್ ಅವರು ತಮ್ಮ ತೀವ್ರ ಬೇಸರವನ್ನು ಹೊರಹಾಕಿದ್ದಾರೆ ಎನ್ನಲಾಗಿದೆ. ಹಿಂದೆ ತಮಗೆ ದಲಿತ ಸಿಎಂ ಸ್ಥಾನ ಕೈತಪ್ಪಿದ್ದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಈ ಬಾರಿ ತಮಗೆ ಡಿಸಿಎಂ ಹುದ್ದೆಯ ಜೊತೆಗೆ ಪ್ರಮುಖವಾದ ಖಾತೆಯನ್ನೇ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ತಮ್ಮ ಹಿರಿತನ ಮತ್ತು ಪಕ್ಷಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಸೂಕ್ತ ಸ್ಥಾನಮಾನ ನೀಡಲೇಬೇಕು ಎಂದು ಅವರು ಹಕ್ಕೊತ್ತಾಯ ಮಂಡಿಸಿದ್ದಾರೆ.
ಜಿ. ಪರಮೇಶ್ವರ್ ಅವರ ಖಡಕ್ ನಿಲುವು ಮತ್ತು ಹಿರಿಯ ನಾಯಕರ ಪಟ್ಟುಗಳಿಂದಾಗಿ ಕಾಂಗ್ರೆಸ್ ಹೈಕಮಾಂಡ್ ಸದ್ಯಕ್ಕೆ ಇಕ್ಕಟ್ಟಿಗೆ ಸಿಲುಕಿದೆ. ತಕ್ಷಣಕ್ಕೆ ಯಾವುದೇ ತರಾತುರಿಯ ತೀರ್ಮಾನ ಕೈಗೊಂಡರೆ ಪಕ್ಷದೊಳಗೆ ಮತ್ತಷ್ಟು ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆ ಇರುವುದರಿಂದ, ಸದ್ಯಕ್ಕೆ ‘ಕಾದು ನೋಡುವ ತಂತ್ರ’ಕ್ಕೆ ಹೈಕಮಾಂಡ್ ಶರಣಾಗಿದೆ. ಮುಂಬರುವ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡಲು ದೆಹಲಿ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.








