ಬೆಂಗಳೂರು: ಕಿರುತೆರೆ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಖ್ಯಾತ ನಿರೂಪಕಿ ಜಾಹ್ನವಿ ಅವರು ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಕನ್ನಡಿಗರ ಮನಗೆದ್ದಿದ್ದ ಈ ಕಿರುತೆರೆ ತಾರೆ, ಈಗ ಬಣ್ಣದ ಲೋಕದಿಂದ ರಾಜಕೀಯದತ್ತ ಮುಖ ಮಾಡಿದ್ದಾರೆ. ರಾಜಕೀಯ ಅಖಾಡಕ್ಕೆ ಅಧಿಕೃತವಾಗಿ ಧುಮುಕುವ ಮೂಲಕ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.
ವರ್ಷಗಳ ಕಾಲ ಈಟಿವಿ ಸೇರಿದಂತೆ ವಿವಿಧ ಪ್ರಮುಖ ವಾಹಿನಿಗಳಲ್ಲಿ ಆ್ಯಂಕರ್ ಆಗಿ ಕೆಲಸ ನಿರ್ವಹಿಸಿದ್ದ ಜಾಹ್ನವಿ, ಆನಂತರ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ತಮ್ಮ ಚಾಣಾಕ್ಷತನ ಮತ್ತು ಮಾತುಗಾರಿಕೆಯಿಂದ ಅಪಾರ ಜನಪ್ರಿಯತೆ ಗಳಿಸಿದ್ದ ಅವರು, ಆ ಬಳಿಕ ಹಲವು ಟಿವಿ ಶೋಗಳು ಹಾಗೂ ಸಿನಿಮಾಗಳಲ್ಲೂ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದರು.
ಜೆಡಿಎಸ್ ಪಕ್ಷಕ್ಕೆ ಅಧಿಕೃತ ಸೇರ್ಪಡೆ
ಮನರಂಜನಾ ರಂಗದಲ್ಲಿ ಸಕ್ರಿಯರಾಗಿದ್ದ ಜಾಹ್ನವಿ, ಇದೀಗ ಪ್ರಾದೇಶಿಕ ಪಕ್ಷವಾದ ಜನತಾದಳ (ಜಾತ್ಯತೀತ) ಸೇರ್ಪಡೆಯಾಗುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ್ದಾರೆ. ಬೆಂಗಳೂರಿನ ಜೆ.ಪಿ. ಭವನದಲ್ಲಿ ನಡೆದ ಪಕ್ಷದ ಅಧಿಕೃತ ಕಾರ್ಯಕ್ರಮದಲ್ಲಿ ಅವರು ಜೆಡಿಎಸ್‌ನ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡರು.
ಕೇಂದ್ರ ಸಚಿವರು ಹಾಗೂ ಜೆಡಿಎಸ್ ಕಟುಂಬದ ಹಿರಿಯ ನಾಯಕರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜಾಹ್ನವಿ ಪಕ್ಷದ ಬಾವುಟ ಹಿಡಿದರು. ಕಾರ್ಯಕ್ರಮದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಜಾಹ್ನವಿ ಅವರಿಗೆ ಜೆಡಿಎಸ್ ಪಕ್ಷದ ಶಾಲು ಹೊದಿಸಿ, ಪಕ್ಷದ ಧ್ವಜವನ್ನು ಹಸ್ತಾಂತರಿಸುವ ಮೂಲಕ ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು.
ಹೊಸ ಇನ್ನಿಂಗ್ಸ್ ಕುರಿತು ಭರವಸೆ
ಮಾಧ್ಯಮ ಮತ್ತು ಗ್ಲಾಮರ್ ಲೋಕದಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ಜಾಹ್ನವಿ ಅವರ ಈ ನಡೆ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಜೆಡಿಎಸ್ ತತ್ವ ಸಿದ್ಧಾಂತಗಳಿಗೆ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರ ನಾಯಕತ್ವಕ್ಕೆ ಮೆಚ್ಚಿ ತಾವು ಪಕ್ಷ ಸೇರಿರುವುದಾಗಿ ಅವರು ತಿಳಿಸಿದ್ದು, ಮುಂಬರುವ ದಿನಗಳಲ್ಲಿ ಪಕ್ಷದ ಬಲವರ್ಧನೆಗಾಗಿ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ.
ಯುವ ನಾಯಕರು ಮತ್ತು ಮಹಿಳಾ ಪ್ರತಿನಿಧಿಗಳಿಗೆ ಜೆಡಿಎಸ್‌ನಲ್ಲಿ ಉತ್ತಮ ಪ್ರೋತ್ಸಾಹ ಸಿಗುತ್ತಿರುವುದರಿಂದ ಜಾಹ್ನವಿ ಅವರ ಸೇರ್ಪಡೆ ಪಕ್ಷಕ್ಕೂ ಹೊಸ ಕಳೆಯನ್ನು ತಂದಿದೆ. ಕಿರುತೆರೆಯಲ್ಲಿ ನಿರೂಪಕಿಯಾಗಿ ಯಶಸ್ಸು ಕಂಡಿದ್ದ ಜಾಹ್ನವಿ, ರಾಜಕೀಯದ ಈ ಹೊಸ ಇನ್ನಿಂಗ್ಸ್‌ನಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಸಾಧಿಸಲಿದ್ದಾರೆ ಎಂಬುದನ್ನು ಮುಂದಿನ ದಿನಗಳೇ ನಿರ್ಣಯಿಸಬೇಕಿದೆ.







