ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ನಗರದ ಹೊರವಲಯದ ಪ್ರಯಾಣಿಕರಿಗೆ ಮತ್ತೊಂದು ಮಹತ್ವದ ಕೊಡುಗೆಯನ್ನು ನೀಡಿದೆ. ಸಾರ್ವಜನಿಕರು, ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳ ವೇಗವಾದ ಮತ್ತು ಸುಲಭ ಪ್ರಯಾಣದ ಹಿತದೃಷ್ಟಿಯಿಂದ ಎರಡು ನೂತನ ವೇಗದೂತ ಸೀಮಿತ ನಿಲುಗಡೆ (Express) ಸಾರಿಗೆ ಸೇವೆಗಳಿಗೆ ಸಾರಿಗೆ ಮತ್ತು ಮುಜರಾಯಿ ಸಚಿವರಾದಂತ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದ್ದಾರೆ.
ಐಟಿಐ ಫ್ಯಾಕ್ಟರಿಯಿಂದ ಹೆಚ್.ಕ್ರಾಸ್‌ಗೆ ಹಾಗೂ ಹೊಸಕೋಟೆಯಿಂದ ನೆಲಮಂಗಲಕ್ಕೆ ಈ ನೂತನ ಬಸ್ ಸೇವೆಗಳನ್ನು ಆರಂಭಿಸಲಾಗಿದೆ.
ನೂತನ ವೇಗದೂತ ಸಾರಿಗೆ ಸೇವೆಗಳ ಸಂಪೂರ್ಣ ಮಾಹಿತಿ:
೧. ಐಟಿಐ ಫ್ಯಾಕ್ಟರಿ – ಹೆಚ್.ಕ್ರಾಸ್ ಸೇವೆ:
-
ಪ್ರಾರಂಭದ ದಿನಾಂಕ: ಈ ಹೊಸ ಸೇವೆಯನ್ನು ಮೇ 22, 2026 ರಿಂದ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗಿದೆ.
-
ಸುತ್ತುವಳಿಗಳು: 30 ನಿಮಿಷಗಳ ಕಾಲಾವಧಿಯ ಅಂತರದಲ್ಲಿ ಒಟ್ಟು 7 ಅನುಸೂಚಿಗಳ ಮೂಲಕ ಪ್ರತಿದಿನ 60 ಸುತ್ತುವಳಿಗಳು ಕಾರ್ಯಾಚರಣೆ ನಡೆಸಲಿವೆ.
-
ಪ್ರಯಾಣ ದರ: ಈ ಮಾರ್ಗದ ಪ್ರಯಾಣಿಕರಿಗೆ ರೂ. 60/- ಗಳ ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ.
೨. ಹೊಸಕೋಟೆ – ನೆಲಮಂಗಲ ಸೇವೆ (ಮಾರ್ಗ ಸಂಖ್ಯೆ: EX-STRR-1):
-
ಹೊಸಕೋಟೆಯಿಂದ ನೆಲಮಂಗಲದವರೆಗೆ ಪ್ರಯಾಣಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಈ ವಿಶೇಷ ವೇಗದೂತ ಸೇವೆಯನ್ನು ಆರಂಭಿಸಲಾಗಿದೆ.
-
ಪ್ರಮುಖ ನಿಲುಗಡೆಗಳು: ನೆಲಮಂಗಲ, ರೈಲ್ವೆ ಗೊಲ್ಲಹಳ್ಳಿ, ಕನಸವಾಡಿ, ಮಧುರ ದೇವಸ್ಥಾನ, ದೊಡ್ಡಬಳ್ಳಾಪುರ, ಡಿ ಕ್ರಾಸ್, ಚಪ್ಪರದಕಲ್ಲು, ವಿಶ್ವನಾಥಪುರ, ದೇವನಹಳ್ಳಿ, ಎಂ.ವಿ.ಜೆ. ಮೆಡಿಕಲ್ ಕಾಲೇಜು ಹಾಗೂ ಹೊಸಕೋಟೆ ಈ ಮಾರ್ಗದ ಪ್ರಮುಖ ನಿಲುಗಡೆಗಳಾಗಿವೆ.
-
ಪ್ರಯಾಣ ದರ: ಪ್ರಯಾಣಿಕರ ಅನುಕೂಲಕ್ಕಾಗಿ ಈ ಮಾರ್ಗದಲ್ಲಿ ಕನಿಷ್ಠ ರೂ. 25 ರಿಂದ ಗರಿಷ್ಠ ರೂ. 110 ರವರೆಗೆ ದರವನ್ನು ನಿಗದಿಪಡಿಸಲಾಗಿದೆ.
ಪ್ರಯೋಜನ ಯಾರಿಗೆ?: ಈ ಹೊಸ ಸೇವೆಗಳಿಂದ ಕೆ.ಆರ್.ಪುರಂ, ಹೊಸಕೋಟೆ, ನಂದಗುಡಿ, ಹಿಂಡಗಾನಹಳ್ಳಿ, ಹೆಚ್.ಕ್ರಾಸ್, ನೆಲಮಂಗಲ, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ಭಾಗದ ಸಾವಿರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರಿಗೆ ನಿತ್ಯದ ಪ್ರಯಾಣ ಸುಲಭವಾಗಲಿದೆ.
ವಿಸ್ತರಣೆಗೊಂಡ ಬಿಎಂಟಿಸಿ ವ್ಯಾಪ್ತಿ ಮತ್ತು ಆದಾಯ:
ಸರ್ಕಾರದ ಆದೇಶದನ್ವಯ ಬಿಎಂಟಿಸಿ ಕಾರ್ಯಾಚರಣೆ ವ್ಯಾಪ್ತಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಿಂದ 40 ಕಿ.ಮೀ ವರೆಗೆ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕನಕಪುರ, ಚನ್ನಪಟ್ಟಣ, ಚಿಕ್ಕಬಳ್ಳಾಪುರ ಹಾಗೂ ತುಮಕೂರಿಗೆ ಒಟ್ಟು 4 ಮಾರ್ಗಗಳಲ್ಲಿ 32 “ವಜ್ರ ವಿಸ್ತಾರ” ಹವಾನಿಯಂತ್ರಿತ (AC) ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
ಸದ್ಯ ಹೊಸಕೋಟೆ ರಸ್ತೆಯಲ್ಲಿ ಈಗಾಗಲೇ ಒಟ್ಟು 188 ಅನುಸೂಚಿಗಳಿಂದ 1,686 ಸುತ್ತುವಳಿಗಳನ್ನು ಚಲಾಯಿಸಲಾಗುತ್ತಿದ್ದು, ಹೊಸಕೋಟೆಯಿಂದ ಮುಂದಕ್ಕೆ 42 ಅನುಸೂಚಿಗಳಿಂದ 378 ಸುತ್ತುವಳಿಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಸುತ್ತಮುತ್ತಲಿನ 9 ಪ್ರಮುಖ ಪಟ್ಟಣಗಳಿಗೆ ಒಟ್ಟು 11 ಮಾರ್ಗಗಳಲ್ಲಿ 124 ಎಕ್ಸ್‌ಪ್ರೆಸ್ ಬಸ್‌ಗಳು ಸಂಚರಿಸುತ್ತಿದ್ದು, ಪ್ರತಿದಿನ ಸರಾಸರಿ 60 ಸಾವಿರ ಪ್ರಯಾಣಿಕರು ಇದರ ಸೌಲಭ್ಯ ಪಡೆಯುತ್ತಿದ್ದಾರೆ. ಇದರಿಂದ ಸಂಸ್ಥೆಗೆ ಪ್ರತಿದಿನ ಸರಾಸರಿ ರೂ. 18.0 ಲಕ್ಷ ಆದಾಯ ಬರುತ್ತಿದೆ.
ಬಿಎಂಟಿಸಿ ನೌಕರರ ಕಲ್ಯಾಣಕ್ಕೆ ಭರ್ಜರಿ ಕ್ರಮಗಳು:
ಸಾರಿಗೆ ಸಂಸ್ಥೆಯು ಸಾರ್ವಜನಿಕ ಸೇವೆಯ ಜೊತೆಗೆ ತನ್ನ ನೌಕರರ ಹಿತರಕ್ಷಣೆಗೂ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ:
-
ವೇತನ ಬಾಕಿ ಬಿಡುಗಡೆ: ನಾಲ್ಕು ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ 2020ನೇ ಸಾಲಿನ ವೇತನ ಪರಿಷ್ಕರಣೆ ಬಾಕಿಗೆ ಒಟ್ಟು ₹1,271.92 ಕೋಟಿ ಮಂಜೂರಾಗಿದ್ದು, ಅದರಲ್ಲಿ ಬಿಎಂಟಿಸಿಗೆ ₹137.24 ಕೋಟಿ ಬಿಡುಗಡೆಯಾಗಿದೆ. 2021ರ 11 ತಿಂಗಳ ವೇತನ ಬಾಕಿಯನ್ನು ಈಗಾಗಲೇ ಮೇ 16, 2026 ರಂದು ಸೇವೆಯಲ್ಲಿರುವ ನೌಕರರ ಖಾತೆಗಳಿಗೆ ಜಮಾ ಮಾಡಲಾಗಿದೆ. ಇನ್ನುಳಿದ ನಿವೃತ್ತ, ರಾಜೀನಾಮೆ ನೀಡಿದ ಹಾಗೂ ಮೃತಪಟ್ಟ ಅರ್ಹ ನೌಕರರಿಗೆ ಮೇ 21 ಮತ್ತು 22, 2026 ರಂದು ಪಾವತಿಸಲಾಗುತ್ತಿದೆ.
-
ಉಚಿತ ಆರೋಗ್ಯ ತಪಾಸಣೆ: ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ಸಹಯೋಗದಲ್ಲಿ 40 ವರ್ಷ ಮೇಲ್ಪಟ್ಟ 13,668 ನೌಕರರಿಗೆ ಉಚಿತ ಹೃದಯ ತಪಾಸಣೆ ಮಾಡಿಸಲಾಗಿದೆ. ಹಾಗೆಯೇ, ಜಯನಗರ ಏರ್ ಚೆಸ್ಟ್ ಆಸ್ಪತ್ರೆಯ ಮೂಲಕ 4,186 ಮುಂಚೂಣಿ ಸಿಬ್ಬಂದಿಗೆ ಶ್ವಾಸಕೋಶ ತಪಾಸಣೆ ನಡೆಸಲಾಗಿದೆ.
-
ಸಾರಿಗೆ ಆಶಾಕಿರಣ ಯೋಜನೆ: ಸಿ-ಕ್ಯಾಂಪ್ ಸಹಯೋಗದಲ್ಲಿ ಸಂಸ್ಥೆಯ 50 ಘಟಕಗಳು ಹಾಗೂ 4 ಕಾರ್ಯಾಗಾರಗಳಲ್ಲಿ ನೌಕರರಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಿ, ಉಚಿತ ಕನ್ನಡಕಗಳನ್ನು ವಿತರಿಸಲಾಗುತ್ತಿದೆ.
-
ಹೊಸ ನೇಮಕಾತಿ: ಕಾರ್ಯಕ್ಷಮತೆ ಹೆಚ್ಚಿಸಲು ನೇರ ನೇಮಕಾತಿ ಮೂಲಕ ಹೊಸದಾಗಿ 2,500 ನಿರ್ವಾಹಕ (Conductors) ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.
ರಾಷ್ಟ್ರೀಯ ಮಟ್ಟದ ಗೌರವ: ಬಿಎಂಟಿಸಿಯ ಉತ್ತಮ ಕಾರ್ಯಾಚರಣೆಯನ್ನು ಗುರುತಿಸಿ Urban Mobility India ಹಾಗೂ ASRTU ಸೇರಿದಂತೆ ವಿವಿಧ ರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಂದ ಇದುವರೆಗೆ ಒಟ್ಟು 156 ಪ್ರಶಸ್ತಿ ಮತ್ತು ಮಾನ್ಯತೆಗಳು ಲಭಿಸಿವೆ.
ಈ ನೂತನ ಸೇವೆಗಳ ಚಾಲನಾ ಕಾರ್ಯಕ್ರಮದ ಸಂದರ್ಭದಲ್ಲಿ ವಿ.ಎಸ್.ಆರಾಧ್ಯ, ಅಧ್ಯಕ್ಷರು, ಬೆಂ.ಮ.ಸಾ.ಸಂಸ್ಥೆ, ಶರತ್ ಕುಮಾರ್ ಬಚ್ಚೇಗೌಡ, ಶಾಸಕರು, ಹೊಸಕೋಟೆ ವಿಧಾನಸಭಾ ಕ್ಷೇತ್ರ, ಬಿ.ಎನ್.ರವಿಕುಮಾರ್, ಶಾಸಕರು, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ, ಶಿವಕುಮಾರ್ K B , IAS, ವ್ಯವಸ್ಥಾಪಕ ನಿರ್ದೇಶಕರು , ನಿಕೇತ್ ರಾಜ್.ಎಂ, ಉಪಾಧ್ಯಕ್ಷರು, ಬೆಂ.ಮ.ಸಾ.ಸಂಸ್ಥೆ,ಮತ್ತು ಇತರೇ ಗಣ್ಯರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.








