ನವದೆಹಲಿ : ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ಸಂಚಲನ ಸೃಷ್ಟಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಜೆಪಿ ಭಾರೀ ಅಬ್ಬರವಾಗಿ ಪ್ರಚಾರ ಪಡೆಯುತ್ತಿದೆ.
ಯುವಜನತೆ ಮತ್ತು ಜಿರಳೆಗಳನ್ನು (ಕಾಕ್ರಾಚ್) ಹೋಲಿಸಿ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (CJI) ಜಸ್ಟಿಸ್ ಸೂರ್ಯಕಾಂತ್ ಅವರು ನೀಡಿದ್ದಾರೆನ್ನಲಾದ ಹೇಳಿಕೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಹೇಳಿಕೆಯ ಬೆನ್ನಲ್ಲೇ ಇಂಟರ್ನೆಟ್ನಲ್ಲಿ ‘ಕಾಕ್ರಾಚ್ ಜನತಾ ಪಾರ್ಟಿ’ (CJP) ಎಂಬ ಅಭೂತಪೂರ್ವ ವ್ಯಂಗ್ಯಾತ್ಮಕ (Parody) ಸೋಷಿಯಲ್ ಮೀಡಿಯಾ ಅಭಿಯಾನವೊಂದು ಆರಂಭವಾಗಿದ್ದು, ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ.
ಆದರೆ, ಈ ಕುರಿತು ಶನಿವಾರ ಸ್ಪಷ್ಟನೆ ನೀಡಿರುವ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, “ಮಾಧ್ಯಮಗಳ ಒಂದು ವರ್ಗವು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ, ತಿರುಚಿ ಪ್ರಸ್ತುತಪಡಿಸಿದೆ” ಎಂದು ಹೇಳಿದ್ದಾರೆ.
ಏನಿದು ‘ಕಾಕ್ರಾಚ್ ಜನತಾ ಪಾರ್ಟಿ’ (CJP)?
ನ್ಯಾಯಮೂರ್ತಿಗಳ ಹೇಳಿಕೆಯಿಂದ ಬೇಸತ್ತ ಯುವಕನೊಬ್ಬ ಆರಂಭಿಸಿದ ಈ ಡಿಜಿಟಲ್ ಪ್ರತಿಭಟನೆ ಈಗ ದೊಡ್ಡ ಆಂದೋಲನವಾಗಿ ಮಾರ್ಪಟ್ಟಿದೆ. ಸದ್ಯ ಇಂಟರ್ನೆಟ್ನಲ್ಲಿ ಈ ಪಾರ್ಟಿಯ ಹೆಸರಿನಲ್ಲಿ ಪ್ರತ್ಯೇಕ ವೆಬ್ಸೈಟ್ ಲಾಂಚ್ ಆಗಿದ್ದು, ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 13 ಮಿಲಿಯನ್ ಗೂ ಹೆಚ್ಚು (13 Million) ಫಾಲೋವರ್ಸ್ ಹೊಂದುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಅಷ್ಟೇ ಅಲ್ಲದೇ, ಕೇವಲ ಕೆಲವೇ ದಿನಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ವೆಬ್ಸೈಟ್ಗೆ ಭೇಟಿ ನೀಡಿ ಈ ‘ಕಾಕ್ರಾಚ್ ಜನತಾ ಪಾರ್ಟಿ’ಯ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ!
ಅಭಿಯಾನದ ಆರಂಭದ ಹಿನ್ನೆಲೆ:
ಈ ವಿಭಿನ್ನ ಆನ್ಲೈನ್ ಅಭಿಯಾನದ ಸಂಸ್ಥಾಪಕ ಮತ್ತು ಸಂಯೋಜಕ ಅಭಿಜೀತ್ ದೀಪ್ಕೆ. ಈ ಕುರಿತು ‘ಬಿಬಿಸಿ ನ್ಯೂಸ್ ಮರಾಠಿ’ ಜೊತೆ ವಿಸ್ತೃತವಾಗಿ ಮಾತನಾಡಿರುವ ಅವರು, ಈ ಆಲೋಚನೆ ತಮಗೆ ಹೇಗೆ ಬಂತು ಎಂಬುದನ್ನು ಬಿಚ್ಚಿಟ್ಟಿದ್ದಾರೆ.
“ನಾನು ಟ್ವಿಟರ್ (ಈಗಿನ ಎಕ್ಸ್) ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ (CJI) ಹೇಳಿಕೆಯನ್ನು ನೋಡುತ್ತಿದ್ದೆ. ದೇಶದ ವ್ಯವಸ್ಥೆಯನ್ನು ಟೀಕಿಸುವ ಮತ್ತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಯುವಕರನ್ನು ಅವರು ‘ಜಿರಳೆಗಳು’ (ಕಾಕ್ರಾಚ್) ಮತ್ತು ‘ಪರಾವಲಂಬಿಗಳಿಗೆ’ ಹೋಲಿಸಿದ್ದರು. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುವ ಸಂವಿಧಾನದ ರಕ್ಷಕರೇ ಯುವಕರನ್ನು ಹೀಗೆ ನಿಂದಿಸಿದ್ದು ನನಗೆ ತೀವ್ರ ಆಶ್ಚರ್ಯ ಮತ್ತು ಆಕ್ರೋಶ ತರಿಸಿತು” ಎಂದು ಅಭಿಜೀತ್ ಹೇಳಿದ್ದಾರೆ.
ಜಿಎನ್ ಜಿ (Gen Z) ಯುವಕರ ಬೆಂಬಲ:
ಇದಕ್ಕೆ ಪ್ರತಿಕ್ರಿಯೆಯಾಗಿ ಅಭಿಜೀತ್ ಅವರು, “ಎಲ್ಲಾ ಜಿರಳೆಗಳು ಒಟ್ಟಿಗೆ ಸೇರಿದರೆ ಏನಾಗಬಹುದು?” ಎಂದು ಟ್ವಿಟರ್ನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ 25 ವರ್ಷದೊಳಗಿನ ‘ಜೆನ್ ಜಿ’ ಯುವಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ನಾವೆಲ್ಲರೂ ಸೇರಿ ಒಂದು ವೇದಿಕೆ ನಿರ್ಮಿಸಬೇಕು ಎಂದು ಯುವಕರು ಒತ್ತಾಯಿಸಿದರು.
“ಅವರು ನಮ್ಮನ್ನು ಜಿರಳೆ ಎಂದು ಕರೆದರೆ, ನಾವು ‘ಕಾಕ್ರಾಚ್ ಜನತಾ ಪಾರ್ಟಿ’ಯನ್ನೇ ಕಟ್ಟೋಣ ಎಂದು ತೀರ್ಮಾನಿಸಿದೆವು. ಸಿಜೆಐ ಅವರು ಯುವಕರನ್ನು ಅವಮಾನಿಸಲು ಯಾವೆಲ್ಲಾ ಪದಗಳನ್ನು ಬಳಸಿದ್ದರೋ (ಸೋಮಾರಿಗಳು, ನಿರುದ್ಯೋಗಿಗಳು, ಸದಾ ಆನ್ಲೈನ್ನಲ್ಲಿ ಇರುವವರು), ಅವುಗಳನ್ನೇ ಈ ಪಾರ್ಟಿಯ ಸದಸ್ಯರಾಗಲು ಇರಬೇಕಾದ ‘ಅರ್ಹತೆಗಳು’ ಎಂದು ನಾವು ಘೋಷಿಸಿದೆವು. ಇದು ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು” ಎಂದು ಅಭಿಜೀತ್ ವಿವರಿಸಿದ್ದಾರೆ.
ಕೇವಲ ತಮಾಷೆಯಲ್ಲ, ಇದು ಯುವಕರ ಆಕ್ರೋಶ!
ಮೊದಲು ಕೇವಲ ತಮಾಷೆಗಾಗಿ ಆರಂಭವಾದ ಈ ಅಭಿಯಾನ, ವ್ಯವಸ್ಥೆಯ ವಿರುದ್ಧ ಯುವಜನತೆಗಿರುವ ತೀವ್ರ ನಿರಾಶೆಯನ್ನು ಹೊರಹಾಕುವ ವೇದಿಕೆಯಾಗಿ ಬದಲಾಗಿದೆ. ಸದ್ಯ ಈ ಪಾರ್ಟಿಗೆ ಪ್ರತ್ಯೇಕ ಪ್ರಣಾಳಿಕೆಯನ್ನು (Manifesto) ಸಹ ಸಿದ್ಧಪಡಿಸಲಾಗಿದೆ. ಭಾರತೀಯ ರಾಜಕೀಯ ಮತ್ತು ಸಾಮಾಜಿಕ ಜಾಲತಾಣಗಳ ಇತಿಹಾಸದಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಆನ್ಲೈನ್ ಪ್ರತಿಭಟನೆ ದಾಖಲಾಗಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ.
Must Watch Guys
Dont let them spread their propaganda— Himanshu Sharma (@Hsharma2712) May 21, 2026








