ಪ್ರಧಾನಿ ನರೇಂದ್ರ ಮೋದಿ ಅವರ ಇಟಲಿ ಪ್ರವಾಸವು ಉಭಯ ದೇಶಗಳ ನಡುವಿನ ಸಾಂಸ್ಕೃತಿಕ, ಶೈಕ್ಷಣಿಕ, ರಕ್ಷಣೆ ಮತ್ತು ಜನರ ನಡುವಿನ ಬಾಂಧವ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಪ್ರಮುಖ ಉಪಕ್ರಮಗಳಿಗೆ ಕಾರಣವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಿಬಿ ಜಾರ್ಜ್ ಬುಧವಾರ ತಿಳಿಸಿದ್ದಾರೆ.
ಪ್ರಧಾನಮಂತ್ರಿಯವರ ಇಟಲಿ ಪ್ರವಾಸದ ಕುರಿತು ಆಯೋಜಿಸಲಾಗಿದ್ದ ವಿಶೇಷ ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಾರ್ಜ್, ಪ್ರಧಾನಿ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು 2027ನೇ ಸಾಲನ್ನು ಭಾರತ ಮತ್ತು ಇಟಲಿ ನಡುವಿನ ‘ಸಂಸ್ಕೃತಿ ವರ್ಷ’ ಎಂದು ಆಚರಿಸಲಾಗುವುದು ಎಂದು ಘೋಷಿಸಿದ್ದಾರೆ ಎಂದು ಹೇಳಿದರು.
”ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ದ್ವಿಪಕ್ಷೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು, ಉಭಯ ನಾಯಕರು 2027ನ್ನು ಭಾರತ ಮತ್ತು ಇಟಲಿ ನಡುವಿನ ಸಂಸ್ಕೃತಿ ವರ್ಷ ಎಂದು ಆಚರಿಸುವುದಾಗಿ ಘೋಷಿಸಿದರು,” ಎಂದು ಜಾರ್ಜ್ ಹೇಳಿದರು.
ಗುಜರಾತ್‌ನ ಲೋಥಲ್‌ನಲ್ಲಿ ‘ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣ’ದ (National Maritime Heritage Complex) ಅಭಿವೃದ್ಧಿಯಲ್ಲಿ ಇಟಲಿಯ ಸಹಕಾರಕ್ಕಾಗಿ ತಿಳುವಳಿಕಾ ಒಪ್ಪಂದಕ್ಕೆ (MoU) ಸಹಿ ಹಾಕಲಾಗಿದೆ. ಹಾಗೆಯೇ ಎರಡೂ ದೇಶಗಳು ಭಾರತ ಮತ್ತು ಇಟಲಿಯಲ್ಲಿರುವ ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣಗಳ ನಡುವೆ ‘ಟ್ವಿನ್ನಿಂಗ್ ಪ್ರೋಗ್ರಾಂ’ (Twinning Programme – ಜಂಟಿ ಸಹಭಾಗಿತ್ವದ ಕಾರ್ಯಕ್ರಮ) ರೂಪಿಸಲು ಕೆಲಸ ಮಾಡುತ್ತಿವೆ ಎಂದು ಅವರು ತಿಳಿಸಿದರು.
ಭಾರತದಿಂದ ಇಟಲಿಗೆ ನರ್ಸ್‌ಗಳ (ಶುಶ್ರೂಷಕರು) ವಲಸೆಯನ್ನು ಸುಲಭಗೊಳಿಸುವ ಜಂಟಿ ಒಪ್ಪಂದದ ಘೋಷಣೆ (JDI) ಈ ಪ್ರವಾಸದ ಪ್ರಮುಖ ಫಲಿತಾಂಶಗಳಲ್ಲಿ ಒಂದಾಗಿದೆ ಎಂದು ಜಾರ್ಜ್ ಮುಂದುವರಿದು ಹೇಳಿದರು.
”ಭಾರತದಿಂದ ಇಟಲಿಗೆ ನರ್ಸ್‌ಗಳ ವಲಸೆಯನ್ನು ಸುಲಭಗೊಳಿಸುವ ಜೆಡಿಐ (JDI) ಈ ಪ್ರವಾಸದ ಪ್ರಮುಖ ಫಲಿತಾಂಶಗಳಲ್ಲಿ ಒಂದಾಗಿದ್ದು, ಇದು ಭಾರತೀಯ ಆರೋಗ್ಯ ವಲಯದ ವೃತ್ತಿಪರರು ಇಟಲಿಗೆ ಸುಲಭವಾಗಿ ತೆರಳಲು ಅನುಕೂಲ ಮಾಡಿಕೊಡುತ್ತದೆ,” ಎಂದು ಅವರು ಹೇಳಿದರು.
ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ಸಂಬಂಧಿಸಿದಂತೆ ಭಾರತ-ಇಟಲಿ ಜಂಟಿ ಮಾರ್ಗಸೂಚಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರದ ಒಪ್ಪಂದಗಳಿಗೂ ಸಹಿ ಹಾಕಲಾಗಿದೆ ಎಂದು ಅವರು ತಿಳಿಸಿದರು.








