ಬೆಂಗಳೂರು: ವೈಮಾಂತರಿಕ್ಷ ಹಾಗೂ ರಕ್ಷಣಾ ವಲಯದ ಬೆಂಗಳೂರು ಮೂಲದ ಆ್ಯಕ್ಸಿಸ್‌ಕೇಡ್ಸ್ ಏರೊಸ್ಪೇಸ್ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್, ರಾಜ್ಯದಲ್ಲಿ ₹6,000 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಮುಂದೆ ಬಂದಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಬುಧವಾರ ಖನಿಜ ಭವನದಲ್ಲಿ ಕಂಪೆನಿಯ ಉನ್ನತಾಧಿಕಾರಿಗಳ ಜೊತೆಗೆ ನಡೆದ ವಿಸ್ತೃತ ಸಮಾಲೋಚನೆಯ ಬಳಿಕ ಮಾಹಿತಿ ನೀಡಿದ ಸಚಿವರು, 200 ಎಕರೆ ಪ್ರದೇಶದಲ್ಲಿ ವೈಮಾಂತರಿಕ್ಷ, ರಕ್ಷಣೆ, ಸೆಮಿಕಂಡಕ್ಟರ್ ಹಾಗೂ ಕೃತಕ ಬುದ್ಧಿಮತ್ತೆ (ಎಐ) ನಾವೀನ್ಯತೆ ಕ್ಷೇತ್ರಗಳಲ್ಲಿ ಉತ್ಪಾದನೆ, ಪರೀಕ್ಷೆ ಮತ್ತು ನಿರ್ವಹಣೆಯ ಸಮಗ್ರ ಕೇಂದ್ರ ಸ್ಥಾಪಿಸುವುದು ಆ್ಯಕ್ಸಿಸ್‌ಕೇಡ್ಸ್ ಏರೊಸ್ಪೇಸ್‌ನ ಮುಖ್ಯ ಉದ್ದೇಶವಾಗಿದೆ. ಕಂಪನಿಯು ಜಾಗತಿಕ ಪಾಲುದಾರಿಕೆಯಡಿ ದೇಶೀಯವಾಗಿ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನೂ ಸ್ಥಾಪಿಸಲಿದೆ ಎಂದು ತಿಳಿಸಿದರು.
ಈ ಕುರಿತು ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡ ಅವರು, ವೈಮಾಂತರಿಕ್ಷ ಹಾಗೂ ರಕ್ಷಣಾ ವಲಯದಲ್ಲಿ ಹೆಸರುವಾಸಿಯಾಗಿರುವ ಬೆಂಗಳೂರು ಮೂಲದ ಆ್ಯಕ್ಸಿಸ್ ಕೇಡ್ಸ್ ಏರೊಸ್ಪೇಸ್ ಇನ್ ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಉನ್ನತಾಧಿಕಾರಿಗಳೊಂದಿಗೆ ಈ ದಿನ ವಿಸ್ತೃತ ಸಭೆ ನಡೆಸಿದೆ. ಈ ವೇಳೆ ಅವರು ರಾಜ್ಯದಲ್ಲಿ ₹6,000 ಕೋಟಿ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದರು.
200 ಎಕರೆ ಪ್ರದೇಶದಲ್ಲಿ ವೈಮಾಂತರಿಕ್ಷ, ರಕ್ಷಣಾ, ಸೆಮಿಕಂಡಕ್ಟರ್ ಹಾಗೂ ಕೃತಕ ಬುದ್ಧಿಮತ್ತೆ (AI) ನಾವೀನ್ಯತೆ ಕ್ಷೇತ್ರಗಳಲ್ಲಿ ಉತ್ಪಾದನೆ, ಪರೀಕ್ಷೆ ಮತ್ತು ನಿರ್ವಹಣೆಯ ಸಮಗ್ರ ಕೇಂದ್ರ ಸ್ಥಾಪಿಸುವುದು ಆ್ಯಕ್ಸಿಸ್ ಕೇಡ್ಸ್ ಏರೊಸ್ಪೇಸ್ ನ ಪ್ರಮುಖ ಉದ್ದೇಶವಾಗಿದೆ. ಜೊತೆಗೆ (R&D) ಕೇಂದ್ರವನ್ನೂ ಸ್ಥಾಪಿಸಲು ಮುಂದಾಗಿದೆ.
ಕಂಪನಿಯು ಹಂತ ಹಂತವಾಗಿ ಒಟ್ಟು ₹6,000 ಕೋಟಿ ಬಂಡವಾಳ ಹೂಡಿಕೆ ಮಾಡಲಿದ್ದು, ಇದರಿಂದ ರಾಜ್ಯದಲ್ಲಿ ಪ್ರತ್ಯಕ್ಷವಾಗಿ 20 ಸಾವಿರ ಹಾಗೂ ಪರೋಕ್ಷವಾಗಿ 54 ಸಾವಿರ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿದೆ. ಕ್ಷಿಪಣಿ ತಯಾರಿಕೆಗೆ ಪೂರಕ ಸೌಲಭ್ಯಗಳು, ರೇಡಾರ್ ಮತ್ತು ಸಂವೇದಕ ತಂತ್ರಜ್ಞಾನ, ಯುದ್ಧ ವಿಮಾನಗಳ ದುರಸ್ತಿ ಮತ್ತು ನಿರ್ವಹಣಾ ಸೌಲಭ್ಯಗಳು (MRO) ಸೇರಿದಂತೆ ವೈಮಾಂತರಿಕ್ಷ ಹಾಗೂ ರಕ್ಷಣಾ ವಲಯದ ಮೂಲಸೌಕರ್ಯ ಅಭಿವೃದ್ಧಿಗೆ ಕಂಪನಿ ವಿಶೇಷ ಆದ್ಯತೆ ನೀಡಲಿದೆ.
ಸಭೆಯಲ್ಲಿ ಆ್ಯಕ್ಸಿಸ್ ಕೇಡ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಾರಧಿ ಚಂದ್ರ ಬಾಬು, ನಿರ್ದೇಶಕರಾದ ಶ್ರೀ ಸುರೇಶ್ ಕುಮಾರ್, ಪ್ರಧಾನ ವ್ಯವಸ್ಥಾಪಕ (ಪ್ರಾಜೆಕ್ಟ್ಸ್) ಶ್ರೀ ಎನ್. ಕೆ. ಸತೀಶ ಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎನ್. ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತರಾದ ಶ್ರೀಮತಿ ಖುಷ್ಬೂ ಗೋಯಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
₹6,000 ಕೋಟಿ ಹೂಡಿಕೆಗೆ ಆ್ಯಕ್ಸಿಸ್ ಕೇಡ್ಸ್ ಏರೊಸ್ಪೇಸ್ ಒಲವು
ಮೂರು ವರ್ಷಗಳಲ್ಲಿ ವೈಮಾಂತರಿಕ್ಷ, ರಕ್ಷಣಾ ಎಂ ಆರ್ ಒ ಹಾಗೂ ತಯಾರಿಕಾ ಕ್ಲಸ್ಟರ್ ಅಭಿವೃದ್ಧಿ
20 ಸಾವಿರ ಪ್ರತ್ಯಕ್ಷ ಹಾಗೂ 54 ಸಾವಿರ ಪರೋಕ್ಷ ಉದ್ಯೋಗ ಸೃಷ್ಟಿ!ವೈಮಾಂತರಿಕ್ಷ ಹಾಗೂ ರಕ್ಷಣಾ ವಲಯದಲ್ಲಿ ಹೆಸರುವಾಸಿಯಾಗಿರುವ ಬೆಂಗಳೂರು ಮೂಲದ ಆ್ಯಕ್ಸಿಸ್ ಕೇಡ್ಸ್ ಏರೊಸ್ಪೇಸ್… pic.twitter.com/oLfRWN0RnG
— M B Patil (@MBPatil) May 20, 2026








