ಮಂಡ್ಯ :- ಸಕ್ಕರೆನಾಡು ಮಂಡ್ಯದಲ್ಲಿ ಎರಡು ತಿಂಗಳಲ್ಲಿ ಐದು ಭೀಕರ ಹತ್ಯೆಗಳು ಸಂಭವಿಸಿದ್ದು, ಜಿಲ್ಲೆಯ ಜನತೆ ಆತಂಕದಲ್ಲಿ ಜೀವನ ನಡೆಸುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಗಳವಾರ ತಡರಾತ್ರಿ 10.30 ರ ಸಮಯದಲ್ಲಿ ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆಯಲ್ಲಿ ದುಷ್ಕರ್ಮಿಗಳ ಗುಂಪೊಂದು ಓರ್ವ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಲಾಗಿದ್ದು, ತಾಲೂಕಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ಮದ್ದೂರು ತಾಲೂಕಿನ ಚುಂಚಗಳ್ಳಿ ಗ್ರಾಮದ ಸುನೀಲ್ (29) ಕೊಲೆಯಾದ ವ್ಯಕ್ತಿಯಾಗಿದ್ದಾನೆ.
ಸುನೀಲ್ ಮತ್ತು ಸ್ನೇಹಿತರಾದ ಸತೀಶ್, ಸಿದ್ದರಾಜು ಅವರೊಂದಿಗೆ ಮಂಗಳವಾರ ರಾತ್ರಿ 9.30ರ ವೇಳೆಗೆ ಕೆ.ಹೊನ್ನಲಗೆರೆಯ ದೀಪ ಬಾರ್ ನಲ್ಲಿ ಮದ್ಯಪಾನ ಮಾಡುವ ವೇಳೆಗೆ ಅಜ್ಜಹಳ್ಳಿ ಗ್ರಾಮದ ನಿಶಾಂತ್ ಮತ್ತು ಆತನ ಸ್ನೇಹಿತರು ಆಗಮಿಸಿದ್ದಾರೆ. ನಿಶಾಂತ್ ಹಾಗೂ ಕ್ಯಾಷಿಯರ್ ಜೊತೆಗೆ ಕೆಲಕಾಲ ಮಾತುಕತೆ ಬೆಳೆದಿದೆ. ಬಳಿಕ ಸುನೀಲ್ ಮತ್ತು ಆತನ ಸ್ನೇಹಿತರು ಮಧ್ಯೆ ಪ್ರವೇಶಿಸಿ ತಿಳಿಗೊಳಿಸಿದ್ದಾರೆ.
ಆನಂತರ ಸುನೀಲ್ ಮತ್ತು ಸ್ನೇಹಿತರು ಒಂದೇ ಬೈಕ್ ನಲ್ಲಿ 10.30 ರ ಸಮಯಕ್ಕೆ ತಮ್ಮ ಸ್ವಗ್ರಾಮ ಚುಂಚಗಳ್ಳಿಗೆ ತೆರಳುವಾಗ ಕೆ. ಹೊನ್ನಲಗೆರೆಯ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ಬೈಕ್ ಅನ್ನು ಅಡ್ಡಗಟ್ಟಿ ಬೈಕ್ ನ ಹಿಂಬದಿ ಕುಳಿತಿದ್ದ ಸುನೀಲ್ ಕುತ್ತಿಗೆ ಭಾಗಕ್ಕೆ ಲಾಂಗ್ ಬೀಸಿ ಪರಾರಿಯಾಗಿದ್ದಾರೆ. ಮಾರಕಾಸ್ತ್ರದ ದಾಳಿಗೆ ಸುನೀಲ್ ಕುತ್ತಿಗೆ ಭಾಗಕ್ಕೆ ಗಂಭೀರವಾಗಿ ಗಾಯಗೊಂಡು ತಕ್ಷಣವೇ ಕುಸಿದು ಬಿದ್ದು ಸುನೀಲ್ ತೀವ್ರ ರಕ್ತಸ್ರಾವದಿಂದ ಬಿದ್ದು ನರಳಾಡಿದ್ದಾರೆ. ಆತನ ಸ್ನೇಹಿತರು ಗ್ರಾಮದ ಯುವಕರಿಗೆ ವಿಷಯ ತಿಳಿಸಿದ್ದಾರೆ.
ಇನ್ನು ವಿಷಯ ತಿಳಿದ ತಕ್ಷಣವೇ ಮದ್ದೂರು ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ನವೀನ್ ಹಾಗೂ ಸಿಬ್ಬಂದಿಗಳು ಗಾಯಾಳು ಸುನೀಲ್ ನನ್ನು ಆತನ ಸ್ನೇಹಿತರು ಹಾಗೂ ಪೋಲೀಸರು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಗಾಯಾಳು ಸುನೀಲ್ ಚಿಕಿತ್ಸೆ ಫಲಕಾರಿಯಾಗದೆ ಮಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ವಿಷಯ ತಿಳಿದು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿ.ಜೆ. ಶೋಭಾರಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಪಡೆದು ಕೊಂಡಿದ್ದು, ಕೊಲೆ ಆರೋಪಿಗಳ ಪತ್ತೆಗೆ ಈಗಾಗಲೇ ವಿಶೇಷ ತಂಡ ರಚನೆ ಮಾಡಲಾಗಿದೆ. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಮದ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ವರದಿ : ಗಿರೀಶ್ ರಾಜ್ ಮಂಡ್ಯ








