ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP/GBA) ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪ್ರಾದೇಶಿಕ ಪಕ್ಷ ಜೆಡಿಎಸ್ ತನ್ನ ರಾಜಕೀಯ ತಂತ್ರಗಾರಿಕೆಯನ್ನು ಚುರುಕುಗೊಳಿಸಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯಲು ಒಲವು ತೋರಿರುವ ಬೆನ್ನಲ್ಲೇ, ಒಂದು ವೇಳೆ ಮಾತುಕತೆ ಮುರಿದುಬಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸಲು ಕೂಡ ಜೆಡಿಎಸ್ ತೆರೆಮರೆಯಲ್ಲಿ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.
100 ವಾರ್ಡ್ಗಳ ಮೇಲೆ ಕಣ್ಣಿಟ್ಟ ದಳಪತಿಗಳು ನಿನ್ನೆ ನಡೆದ ಜೆಡಿಎಸ್ ಪ್ರಮುಖ ನಾಯಕರ ಮಹತ್ವದ ಸಭೆಯಲ್ಲಿ ಚುನಾವಣಾ ಕಾರ್ಯತಂತ್ರಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ. ಈಗಾಗಲೇ ನಗರದ ಕನಿಷ್ಠ 100 ವಾರ್ಡ್ಗಳಲ್ಲಿ ಸ್ಪರ್ಧಿಸಲು ಜೆಡಿಎಸ್ ಬಲವಾದ ನಿರ್ಧಾರ ಮಾಡಿದೆ. ಬಿಜೆಪಿಯ ಸೀಟು ಹಂಚಿಕೆಯ ನಿರ್ಧಾರದ ಮೇಲೆಯೇ ಜೆಡಿಎಸ್ನ ಮುಂದಿನ ಭವಿಷ್ಯ ಮತ್ತು ಮೈತ್ರಿಯ ಆಯಸ್ಸು ನಿರ್ಧಾರವಾಗಲಿದೆ ಎಂದು ಸಭೆಯಲ್ಲಿ ವಿಶ್ಲೇಷಿಸಲಾಗಿದೆ.
ಬಿಜೆಪಿ ಆಫರ್ ಮೇಲೆ ಮೈತ್ರಿ ಭವಿಷ್ಯ ಮೈತ್ರಿ ಮಾತುಕತೆಯ ವೇಳೆ ಬಿಜೆಪಿ ನೀಡುವ ಆಫರ್ ಜೆಡಿಎಸ್ ನಾಯಕರ ಮುಂದಿನ ನಡೆಗೆ ದಾರಿದೀಪವಾಗಲಿದೆ. ಬಿಜೆಪಿ ಕನಿಷ್ಠ 90 ರಿಂದ 100 ವಾರ್ಡ್ಗಳನ್ನು ಜೆಡಿಎಸ್ಗೆ ಬಿಟ್ಟುಕೊಟ್ಟರೆ ಮಾತ್ರ ಜಂಟಿಯಾಗಿ ಚುನಾವಣಾ ಅಖಾಡಕ್ಕೆ ಇಳಿಯಲು ದಳ ನಾಯಕರು ಉತ್ಸುಕರಾಗಿದ್ದಾರೆ. ಒಂದು ವೇಳೆ ಬಿಜೆಪಿ 90 ಕ್ಕಿಂತ ಕಡಿಮೆ ವಾರ್ಡ್ಗಳನ್ನು ನೀಡಲು ಮುಂದಾದರೆ, ಮೈತ್ರಿಯಿಂದ ಹಿಂದೆ ಸರಿದು ಪ್ರತ್ಯೇಕವಾಗಿ ಸ್ಪರ್ಧಿಸಲು ಜೆಡಿಎಸ್ ಹೈಕಮಾಂಡ್ ತೀರ್ಮಾನಿಸಿದೆ.
ನಾಯಕರಿಗೆ ಹೆಚ್.ಡಿ. ಕುಮಾರಸ್ವಾಮಿ ಖಡಕ್ ಸೂಚನೆ ವಾರ್ಡ್ಗಳ ಹಂಚಿಕೆಯ ಮಾತುಕತೆಯ ವೇಳೆ ರಾಜಕೀಯವಾಗಿ ಏನು ಬೇಕಾದರೂ ಆಗಬಹುದು. ಹೀಗಾಗಿ ಮೈತ್ರಿಯನ್ನೇ ನಂಬಿ ಕೂರದೆ, ಸ್ವತಂತ್ರ ಸ್ಪರ್ಧೆಗೂ ಸಜ್ಜಾಗುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪಕ್ಷದ ನಾಯಕರು ಹಾಗೂ ಆಕಾಂಕ್ಷಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಮೈತ್ರಿ ಕೈಗೂಡದಿದ್ದರೂ ಸಹ ಜಿಬಿಎ ಚುನಾವಣಾ ಅಖಾಡದಲ್ಲಿ ಸ್ವಂತ ಬಲದ ಮೇಲೆ ಅಬ್ಬರಿಸಲು ಜೆಡಿಎಸ್ ಈಗಿನಿಂದಲೇ ಹೊಸ ತಂತ್ರ ರೂಪಿಸುತ್ತಿದೆ.








