ವಾಷಿಂಗ್ಟನ್: ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯ ತಲ್ಲಣಗಳ ಮಧ್ಯೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸುವಂತಹ ಹೇಳಿಕೆಯೊಂದನ್ನು ನೀಡಿದ್ದಾರೆ. ಇರಾನ್ ಜೊತೆಗಿನ “ಯುದ್ಧವು ಅತ್ಯಂತ ವೇಗವಾಗಿ ಕೊನೆಗೊಳ್ಳಲಿದೆ” ಎಂದು ಪ್ರತಿಪಾದಿಸಿರುವ ಟ್ರಂಪ್, ಅಮೆರಿಕಾದ ಕಠಿಣ ನಿಲುವು ಮತ್ತು ಆರ್ಥಿಕ ನಿರ್ಬಂಧಗಳಿಂದಾಗಿ ಇರಾನ್ ಸದ್ಯ ಸಂಧಾನದ ಒಪ್ಪಂದವನ್ನು (Deal) ಮಾಡಿಕೊಳ್ಳಲು ತೀವ್ರವಾಗಿ ಹಪಹಪಿಸುತ್ತಿದೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಈ ರಾಜತಾಂತ್ರಿಕ ಬೆಳವಣಿಗೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು (Oil Prices) ಭಾರಿ ಪ್ರಮಾಣದಲ್ಲಿ ಕುಸಿಯಲಿವೆ ಎಂದೂ ಅವರು ಭವಿಷ್ಯ ನುಡಿದಿದ್ದಾರೆ.
ಅಮೆರಿಕ ವಿಧಿಸಿರುವ ಆರ್ಥಿಕ ದಿಗ್ಬಂಧನಗಳಿಂದಾಗಿ ಇರಾನ್ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಮತ್ತು ಅಮೆರಿಕದೊಂದಿಗೆ ಹೊಸ ಒಪ್ಪಂದವನ್ನು ಮಾಡಿಕೊಳ್ಳಲು ತಾವಾಗಿಯೇ ಮುಂದೆ ಬರಲಿದ್ದಾರೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಏರಿಕೆಯಾಗುವ ಭೀತಿ ಎದುರಾಗಿತ್ತು. ಆದರೆ, ಪರಿಸ್ಥಿತಿ ಶೀಘ್ರದಲ್ಲೇ ಹತೋಟಿಗೆ ಬರಲಿದ್ದು, ತೈಲದ ಬೆಲೆಗಳು ಗಣನೀಯವಾಗಿ ಕೆಳಗಿಳಿಯಲಿವೆ ಎಂದು ಟ್ರಂಪ್ ಆರ್ಥಿಕ ವಲಯಕ್ಕೆ ಭರವಸೆ ನೀಡಿದ್ದಾರೆ.
ಇರಾನ್ ವಿರುದ್ಧ ಅಧ್ಯಕ್ಷರ ಯುದ್ಧ ಘೋಷಿಸುವ ಅಧಿಕಾರವನ್ನು ಸೀಮಿತಗೊಳಿಸುವ ನಿರ್ಣಯವನ್ನು ಯುಎಸ್ ಸೆನೆಟ್ ಇತ್ತೀಚೆಗಷ್ಟೇ ಅಂಗೀಕರಿಸಿತ್ತು. ಇದರ ಬೆನ್ನಲ್ಲೇ ಟ್ರಂಪ್ ತಾವು ಯುದ್ಧದ ಪರವಾಗಿಲ್ಲ, ಬದಲಿಗೆ ಇರಾನ್ ಅನ್ನು ಸೌಮ್ಯ ಹಾದಿಗೆ ತರುತ್ತಿರುವುದಾಗಿ ಬಿಂಬಿಸಲು ಈ ಹೇಳಿಕೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.








