ಬೆಂಗಳೂರು: ರಾಜ್ಯದ ಸಾರಿಗೆ ನೌಕರರು ತಮ್ಮ ವಿವಿಧ ಬಾಕಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಬಾರಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ನೌಕರರ ಒಕ್ಕೂಟಗಳು ಎಚ್ಚರಿಕೆ ನೀಡಿವೆ. ಬುಧವಾರದಿಂದಲೇ ಮುಷ್ಕರ ಆರಂಭವಾಗುತ್ತಿರುವುದರಿಂದ ರಾಜಧಾನಿಯ ಬಿಎಂಟಿಸಿ ಹಾಗೂ ರಾಜ್ಯದ ಪ್ರಮುಖ ಸಾರಿಗೆ ಸಂಸ್ಥೆಯಾದ ಕೆಎಸ್ಆರ್ಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ಬಸ್ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದರಿಂದಾಗಿ ಪ್ರತಿನಿತ್ಯ ಸಾರಿಗೆ ಬಸ್‌ಗಳನ್ನೇ ಆಶ್ರಯಿಸಿರುವ ಲಕ್ಷಾಂತರ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ.
ಸಾರಿಗೆ ನೌಕರರ ಈ ದಿಢೀರ್ ಹೋರಾಟಕ್ಕೆ ಸೆಡ್ಡು ಹೊಡೆಯಲು ಸಾರಿಗೆ ಇಲಾಖೆ ಹಾಗೂ ಸರ್ಕಾರ ಜಂಟಿಯಾಗಿ ವಿಶೇಷ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ನೌಕರರು ಮುಷ್ಕರ ನಡೆಸಿದರೂ ಸಹ ಸಾರ್ವಜನಿಕ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಇಲಾಖೆಯು ‘ಪ್ಲಾನ್ ಬಿ’ ಸಿದ್ಧಪಡಿಸಿಕೊಂಡಿದೆ. ಪ್ರತಿಭಟನೆಯ ನಡುವೆಯೂ ಬಹುತೇಕ ಸಾರಿಗೆ ಬಸ್‌ಗಳನ್ನು ರಸ್ತೆಗೆ ಇಳಿಸಲು ಇಲಾಖೆ ತೀರ್ಮಾನಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಸಾರಿಗೆ ನಿಗಮಗಳ ಬಸ್‌ಗಳ ಕೊರತೆಯನ್ನು ನೀಗಿಸಲು ರಾಜ್ಯ ಸರ್ಕಾರವು ಖಾಸಗಿ ಬಸ್ ಮಾಲೀಕರ ನೆರವು ಪಡೆಯಲು ಮುಂದಾಗಿದೆ. ಮುಷ್ಕರದ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಮಾರ್ಗಗಳನ್ನು ಗುರುತಿಸಿ, ಅಲ್ಲಿ ಖಾಸಗಿ ಬಸ್‌ಗಳ ಸೇವೆಯನ್ನು ಬಳಸಿಕೊಳ್ಳಲು ಸಾರಿಗೆ ನಿಗಮಗಳು ಮಾತುಕತೆ ನಡೆಸಿವೆ. ಅಗತ್ಯ ಬಿದ್ದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಹಳಿ ತಪ್ಪದಂತೆ ತಡೆಯಲು ಖಾಸಗಿ ವಾಹನಗಳಿಗೆ ಮುಕ್ತ ಅವಕಾಶ ಕಲ್ಪಿಸುವ ಚಿಂತನೆಯೂ ಸರ್ಕಾರದ ಮುಂದಿದೆ.
ಬಸ್‌ಗಳು ಲಭ್ಯವಿದ್ದರೂ ಚಾಲಕರ ಕೊರತೆ ಎದುರಾಗದಂತೆ ತಡೆಯಲು ಸಾರಿಗೆ ಇಲಾಖೆಯು ಮೊದಲ ಆದ್ಯತೆಯಾಗಿ ನಿಗಮಗಳಲ್ಲಿರುವ ತರಬೇತಿ ನಿರತ (ಟ್ರೈನಿ) ಚಾಲಕರನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಒಂದು ವೇಳೆ ಪರಿಸ್ಥಿತಿ ಕೈಮೀರಿ ಪ್ರಯಾಣಿಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದರೆ, ಸಾರಿಗೆ ನಿಗಮಗಳ ಸ್ವಂತ ಬಸ್‌ಗಳನ್ನೇ ಚಲಾಯಿಸಲು ಖಾಸಗಿ ಬಸ್ ಚಾಲಕರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳುವ ಕುರಿತು ಗಂಭೀರ ಚಿಂತನೆ ನಡೆಸಲಾಗುತ್ತಿದೆ. ಖಾಸಗಿ ಚಾಲಕರ ಮೂಲಕ ಸರ್ಕಾರಿ ಬಸ್‌ಗಳನ್ನು ರನ್ ಮಾಡುವ ಮೂಲಕ ಮುಷ್ಕರದ ತೀವ್ರತೆಯನ್ನು ತಗ್ಗಿಸಲು ಇಲಾಖೆ ಹರಸಾಹಸ ಪಡುತ್ತಿದೆ.








