ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಅಧಿಕ ರಕ್ತದೊತ್ತಡ (High BP) ಅಥವಾ ಹೈಪರ್ ಟೆನ್ಷನ್ ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ರಕ್ತದೊತ್ತಡವನ್ನು ಆರಂಭದಲ್ಲೇ ಪತ್ತೆಹಚ್ಚಿ ನಿಯಂತ್ರಿಸದಿದ್ದರೆ, ಅದು ಹೃದಯಾಘಾತ, ರಕ್ತನಾಳಗಳ ಹಾನಿ ಮತ್ತು ಮೂತ್ರಪಿಂಡಗಳ (ಕಿಡ್ನಿ) ವೈಫಲ್ಯದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಆದರೆ, ಸೂಕ್ತ ಮುನ್ನೆಚ್ಚರಿಕೆಗಳಿಂದ ಈ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ವಿಶ್ವ ಆರೋಗ್ಯ ಸಂಸ್ಥೆ (WHO) ಸೂಚಿಸಿರುವ 7 ಪ್ರಮುಖ ಸೂತ್ರಗಳು ಇಲ್ಲಿವೆ:
1. ತಂಬಾಕು ಮತ್ತು ಆಲ್ಕೋಹಾಲ್‌ನಿಂದ ದೂರವಿರಿ
ಧೂಮಪಾನ ಮತ್ತು ಮದ್ಯಪಾನ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ. ತಂಬಾಕು ಮತ್ತು ಆಲ್ಕೋಹಾಲ್ ಸೇವನೆಯು ರಕ್ತದೊತ್ತಡವನ್ನು ವೇಗವಾಗಿ ಹೆಚ್ಚಿಸುವುದಲ್ಲದೆ, ಇತರ ಕಾಯಿಲೆಗಳಿಗೂ ಕಾರಣವಾಗುತ್ತದೆ. ಆದ್ದರಿಂದ ಇವುಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಅಥವಾ ಮಿತಿಗೊಳಿಸುವುದು ಅತ್ಯಗತ್ಯ.
2. ದಿನಕ್ಕೆ ಕನಿಷ್ಠ 30 ನಿಮಿಷಗಳ ವ್ಯಾಯಾಮ
ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ನೈಸರ್ಗಿಕವಾಗಿ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
3. ರಕ್ತದೊತ್ತಡದ ನಿಯಮಿತ ತಪಾಸಣೆ
ಬಿಪಿ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳುತ್ತಿರುವುದು ತುಂಬಾ ಮುಖ್ಯ. ಇದರಿಂದ ರಕ್ತದೊತ್ತಡದಲ್ಲಿ ಆಗುವ ಏರಿಳಿತಗಳನ್ನು ಮೊದಲೇ ಪತ್ತೆಹಚ್ಚಿ, ತಕ್ಷಣವೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
4. ಪೌಷ್ಟಿಕಯುಕ್ತ ಆರೋಗ್ಯಕರ ಆಹಾರ ಸೇವನೆ
ಹೃದಯದ ಆರೋಗ್ಯ ಮತ್ತು ರಕ್ತದೊತ್ತಡದ ನಿಯಂತ್ರಣಕ್ಕೆ ನಾವು ಸೇವಿಸುವ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಜೀವಸತ್ವಗಳು (Vitamins), ಖನಿಜಗಳು ಮತ್ತು ಇತರ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳಿ.
5. ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಫ್ಯಾಟ್ ನಿಷೇಧ
ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ದೂರವಿರಲು ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಫ್ಯಾಟ್ (ಗೆದ್ದಲು ಅಥವಾ ಸಂಸ್ಕರಿಸಿದ ಕೊಬ್ಬು) ಹೊಂದಿರುವ ಆಹಾರ ಪದಾರ್ಥಗಳನ್ನು ಸೇವಿಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಕಟ್ಟುನಿಟ್ಟಾಗಿ ಸೂಚಿಸಿದೆ. ಇವು ರಕ್ತನಾಳಗಳಲ್ಲಿ ಬ್ಲಾಕ್ ಉಂಟುಮಾಡಬಹುದು.
6. ಉಪ್ಪಿನ ಬಳಕೆಯನ್ನು ಕಡಿಮೆ ಮಾಡಿ
ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡಬೇಕು. ಅತಿಯಾದ ಉಪ್ಪು (ಸೋಡಿಯಂ) ಸೇವನೆಯು ರಕ್ತದೊತ್ತಡವನ್ನು ನೇರವಾಗಿ ಹೆಚ್ಚಿಸುತ್ತದೆ. ಆದ್ದರಿಂದ ಉಪ್ಪಿನ ಬಳಕೆಯಲ್ಲಿ ಮಿತಿ ಇರಲಿ.
7. ಮಾನಸಿಕ ಒತ್ತಡದ ನಿರ್ವಹಣೆ ಮತ್ತು ಸೂಕ್ತ ಔಷಧಿ
ಅತಿಯಾದ ಮಾನಸಿಕ ಒತ್ತಡವೂ ಹೈ ಬಿಪಿಗೆ ಪ್ರಮುಖ ಕಾರಣವಾಗಿದೆ. ಧಾನ್ಯ, ಯೋಗ ಅಥವಾ ಹವ್ಯಾಸಗಳ ಮೂಲಕ ಒತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಇದರೊಂದಿಗೆ, ಈಗಾಗಲೇ ಬಿಪಿ ಸಮಸ್ಯೆ ಇರುವವರು ವೈದ್ಯರ ಸಲಹೆಯ ಮೇರೆಗೆ ನಿಯಮಿತವಾಗಿ ಸೂಕ್ತ ಔಷಧಿಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ.








