ಬೆಂಗಳೂರು: ಕ್ಯಾನ್ಸರ್ ಎಂಬ ಹೆಸರು ಕೇಳಿದರೆ ಸಾಕು, ರೋಗಿಗಳಿಗಿಂತ ಹೆಚ್ಚಾಗಿ ಅವರನ್ನು ನೋಡಿಕೊಳ್ಳುವ ಕುಟುಂಬಸ್ಥರೇ ತೀವ್ರ ಮಾನಸಿಕ ನರಕಯಾತನೆ ಅನುಭವಿಸುತ್ತಾರೆ. ಆಸ್ಪತ್ರೆಗಳ ಸುತ್ತ ಅಲೆಯುವುದು, ಬೆಡ್ ಸಿಗದೆ ಗಂಟೆಗಟ್ಟಲೆ ಕಾಯುವುದು.. ಇಂತಹ ಹತ್ತು ಹಲವು ಸಮಸ್ಯೆಗಳಿಗೆ ಬ್ರೇಕ್ ಹಾಕುವ ಮೂಲಕ ವೈದ್ಯಕೀಯ ಇತಿಹಾಸದಲ್ಲೇ ಒಂದು ಅದ್ಭುತ ಸಂಭವಿಸಿದೆ.
ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆಗಾಗಿ ವಿಶ್ವದಲ್ಲೇ ಮೊದಲ ಬಾರಿಗೆ ಚರ್ಮದ ಅಡಿಗೆ (Subcutaneous) ನೀಡಲಾಗುವ ಅತ್ಯಾಧುನಿಕ ಇಮ್ಯುನೊಥೆರಪಿ ಇಂಜೆಕ್ಷನ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಪ್ರಮುಖ ಸ್ವಿಸ್ ಫಾರ್ಮಾ ದೈತ್ಯ ಕಂಪನಿ ‘ರೋಚ್’ (Roche) ಈ ಹೊಸ ಔಷಧವನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಒಂದೇ ಒಂದು ಇಂಜೆಕ್ಷನ್ ಚಿಕಿತ್ಸೆಯ ಸಮಯವನ್ನು ಬರೋಬ್ಬರಿ ಶೇಕಡಾ 80 ರಷ್ಟು ಕಡಿಮೆ ಮಾಡಲಿದೆ.
7 ನಿಮಿಷಗಳಲ್ಲೇ ಡಿಸ್ಚಾರ್ಜ್: ಸಮಯದ ಭಾರಿ ಉಳಿತಾಯ
ಹಿಂದೆ ಕ್ಯಾನ್ಸರ್ ರೋಗಿಗಳಿಗೆ ಐವಿ (IV) ಮೂಲಕ ಡ್ರಿಪ್ಸ್ ಇಡಬೇಕಾಗುತ್ತಿತ್ತು. ಇದರಿಂದಾಗಿ ರೋಗಿಗಳು ಗಂಟೆಗಟ್ಟಲೆ ಆಸ್ಪತ್ರೆಯಲ್ಲೇ ಕಳೆಯಬೇಕಾಗುತ್ತಿತ್ತು. ಆದರೆ ಈ ಹೊಸ ಇಂಜೆಕ್ಷನ್ ಮೂಲಕ ಕೇವಲ 7 ನಿಮಿಷಗಳಲ್ಲಿ ಚಿಕಿತ್ಸೆಯನ್ನು ಪೂರ್ಣಗೊಳಿಸಬಹುದು. ರೋಗಿಗಳು ಆಸ್ಪತ್ರೆಗೆ ಬರುವುದು, ಇಂಜೆಕ್ಷನ್ ತೆಗೆದುಕೊಳ್ಳುವುದು ಮತ್ತು ತಕ್ಷಣವೇ ಮನೆಗೆ ಮರಳುವುದು.. ಎಲ್ಲವೂ ಅತ್ಯಂತ ವೇಗವಾಗಿ ಮುಗಿದುಹೋಗುತ್ತದೆ. ಇದು ಈಗಾಗಲೇ ವಿಶ್ವಾದ್ಯಂತ 85 ದೇಶಗಳಲ್ಲಿ ಅನುಮೋದನೆ ಪಡೆದಿದ್ದು, 10,000 ಕ್ಕೂ ಹೆಚ್ಚು ರೋಗಿಗಳಿಗೆ ಹೊಸ ಜೀವನವನ್ನು ನೀಡಿದೆ.
ಬೆಲೆ ಎಷ್ಟು? ಯಾರಿಗೆ ಉಪಯುಕ್ತ?
ಭಾರತೀಯ ಡ್ರಗ್ಸ್ ಕಂಟ್ರೋಲರ್ ಜನರಲ್ (DCGI) ಮೂರು ತಿಂಗಳ ಹಿಂದೆಯೇ ಈ ಔಷಧಿಗೆ ಅನುಮೋದನೆ ನೀಡಿದೆ. ‘ನಾನ್-ಸ್ಮಾಲ್ ಸೆಲ್ ಲಂಗ್ ಕ್ಯಾನ್ಸರ್’ (Non-small cell lung cancer) ಇರುವ ರೋಗಿಗಳಿಗೆ ಇದು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಒಂದು ಡೋಸ್ ಬೆಲೆ: 3.7 ಲಕ್ಷ ರೂಪಾಯಿಗಳು.
ಚಿಕಿತ್ಸಾ ಅವಧಿ: ಇದನ್ನು ಪ್ರತಿ 21 ದಿನಗಳ ಸೈಕಲ್‌ಗೆ ಒಮ್ಮೆ ನೀಡಬೇಕಾಗುತ್ತದೆ.
ವಿಶೇಷ ಸೌಲಭ್ಯ: ಕೇಂದ್ರ ಸರ್ಕಾರದ ನೌಕರರು ಮತ್ತು ಪೆನ್ಷನರ್‌ಗಳ ಹೆಲ್ತ್ ಕಾರ್ಡ್ ಹೊಂದಿರುವವರಿಗೂ ಈ ಔಷಧಿ ಲಭ್ಯವಿರುತ್ತದೆ.
ಪುರುಷರಲ್ಲಿ ಹೆಚ್ಚಾಗುತ್ತಿರುವ ಶ್ವಾಸಕೋಶದ ಕ್ಯಾನ್ಸರ್ ಭೀತಿ
ಭಾರತದಲ್ಲಿ ವರದಿಯಾಗುತ್ತಿರುವ ಕ್ಯಾನ್ಸರ್ ಪ್ರಕರಣಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅತ್ಯಂತ ವೇಗವಾಗಿ ಹರಡುತ್ತಿದೆ. ಧೂಮಪಾನ ಮತ್ತು ಹೆಚ್ಚುತ್ತಿರುವ ವಾಯು ಮಾಲಿನ್ಯದ ಕಾರಣದಿಂದಾಗಿ ಪ್ರತಿ ವರ್ಷ ಸುಮಾರು 80,000 ಜನರು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ದುರದೃಷ್ಟವಶಾತ್, ಶೇಕಡಾ 80 ರಿಂದ 90 ರಷ್ಟು ರೋಗಿಗಳಲ್ಲಿ ಕಾಯಿಲೆಯು ಕೊನೆಯ ಹಂತಕ್ಕೆ ತಲುಪಿದಾಗ ಮಾತ್ರ ಇದು ಪತ್ತೆಯಾಗುತ್ತಿದೆ.








