ನವದೆಹಲಿ: ಕ್ಯಾನ್ಸರ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಗಂಟೆಗಟ್ಟಲೆ ಕಾಯುವ ಮತ್ತು ಸುದೀರ್ಘ ಚಿಕಿತ್ಸೆ ಪಡೆಯುವ ಕಷ್ಟಕ್ಕೆ ಕೊನೆಗೂ ಮುಕ್ತಿ ಸಿಗುವ ಮುನ್ಸೂಚನೆ ಸಿಕ್ಕಿದೆ. ಜಾಗತಿಕ ಫಾರ್ಮಾ ದೈತ್ಯ ‘ರೋಚ್ ಫಾರ್ಮಾ’ (Roche Pharma) ಸಂಸ್ಥೆಯು ಭಾರತದಲ್ಲಿ ಮೊದಲ ಬಾರಿಗೆ ಕೇವಲ 7 ನಿಮಿಷಗಳಲ್ಲಿ ನೀಡಬಹುದಾದ ಕ್ರಾಂತಿಕಾರಿ ಕ್ಯಾನ್ಸರ್ ಇಮ್ಯುನೊಥೆರಪಿ ಇಂಜೆಕ್ಷನ್ ಅನ್ನು ಬಿಡುಗಡೆ ಮಾಡಿದೆ. ಆದರೆ, ಇದರ ಬೆಲೆ ಮಾತ್ರ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಗಗನಕುಸುಮವಾಗಿದೆ. ಈ ಒಂದು ಡೋಸ್ ಇಂಜೆಕ್ಷನ್ನ ಬೆಲೆ ಬರೋಬ್ಬರಿ 3.7 ಲಕ್ಷ ರೂಪಾಯಿ ಆಗಿದೆ!
ಈ ಹೊಸ ವೈದ್ಯಕೀಯ ಆವಿಷ್ಕಾರದ ಸಂಪೂರ್ಣ ವಿವರಗಳು ಇಲ್ಲಿವೆ:
’ಟೆಸೆಂಟ್ರಿಕ್’ (Tecentriq) ಎಂದರೇನು?
ಇದು ಶ್ವಾಸಕೋಶದ ಕ್ಯಾನ್ಸರ್ (Lung Cancer) ರೋಗಿಗಳಿಗೆ ನೀಡಲಾಗುವ ಅತ್ಯಾಧುನಿಕ ಇಮ್ಯುನೊಥೆರಪಿ ಚಿಕಿತ್ಸೆಯಾಗಿದೆ. ಈ ಹಿಂದೆ ಇದೇ ಚಿಕಿತ್ಸೆಯನ್ನು ರೋಗಿಗಳಿಗೆ ಐವಿ (Intravenous – ನರಗಳ ಮೂಲಕ) ಡ್ರಿಪ್ಸ್ ರೂಪದಲ್ಲಿ ನೀಡಲಾಗುತ್ತಿತ್ತು. ಅದಕ್ಕೆ ಕನಿಷ್ಠ 2 ರಿಂದ 5 ಗಂಟೆಗಳ ಕಾಲ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಬೇಕಾಗುತ್ತಿತ್ತು. ಆದರೆ ಈಗ ಬಿಡುಗಡೆಯಾಗಿರುವ ಹೊಸ ಚುಚ್ಚುಮದ್ದನ್ನು ಚರ್ಮದ ಅಡಿಯಲ್ಲಿ (Subcutaneous) ಕೇವಲ 7 ನಿಮಿಷಗಳಲ್ಲಿ ನೀಡಬಹುದಾಗಿದೆ.
ರೋಗಿಗಳಿಗೆ ಮತ್ತು ಆಸ್ಪತ್ರೆಗಳಿಗೆ ಹೇಗೆ ಸಹಕಾರಿ?
ಸಮಯದ ಉಳಿತಾಯ: ಆಸ್ಪತ್ರೆಯಲ್ಲಿ ಗಂಟೆಗಟ್ಟಲೆ ಕಳೆಯುವ ದೈಹಿಕ ಮತ್ತು ಮಾನಸಿಕ ಒತ್ತಡ ತಪ್ಪುತ್ತದೆ.
ಸಾಮಾನ್ಯವಾಗಿ ಒಬ್ಬ ರೋಗಿಗೆ ಐವಿ ಡ್ರಿಪ್ಸ್ ನೀಡುವಷ್ಟರಲ್ಲೇ, ಈ ಹೊಸ ಇಂಜೆಕ್ಷನ್ ಮೂಲಕ 5 ಜನ ರೋಗಿಗಳಿಗೆ ಚಿಕಿತ್ಸೆ ನೀಡಬಹುದು. ಇದರಿಂದ ಆಸ್ಪತ್ರೆಗಳಲ್ಲಿನ ಕ್ಯೂ ಮತ್ತು ವೈದ್ಯಕೀಯ ಸಿಬ್ಬಂದಿಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ.
ನೋವು ಮುಕ್ತ: ಕ್ಯಾನ್ಸರ್ನಿಂದ ಬಳಲುತ್ತಿರುವ ರೋಗಿಗಳಿಗೆ ಪದೇ ಪದೇ ನರಗಳನ್ನು ಹುಡುಕಿ ಸೂಜಿ ಚುಚ್ಚುವ ನೋವು ಇರುವುದಿಲ್ಲ.
ಕಂಪನಿಯ ಪ್ರಕಾರ, ಇದರ ಒಂದು ವೈಲ್ (Vial) ಅಥವಾ ಡೋಸ್ನ ಗರಿಷ್ಠ ಚಿಲ್ಲರೆ ಬೆಲೆ (MRP) 3.7 ಲಕ್ಷ ರೂಪಾಯಿ ಆಗಿದೆ. ಕ್ಯಾನ್ಸರ್ನ ತೀವ್ರತೆಯ ಆಧಾರದ ಮೇಲೆ ಒಬ್ಬ ರೋಗಿಗೆ ಸಾಮಾನ್ಯವಾಗಿ 3 ರಿಂದ 6 ಡೋಸ್ಗಳ ಅಗತ್ಯವಿರುತ್ತದೆ. ಅಂದರೆ ಒಟ್ಟು ಚಿಕಿತ್ಸೆಯ ವೆಚ್ಚ ಲಕ್ಷಾಂತರ ರೂಪಾಯಿಗಳಾಗಲಿದೆ.








