ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಚುರುಕುಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿ ನಿನ್ನೆ ಬಂಧನಕ್ಕೊಳಗಾಗಿದ್ದ ಪ್ರಶ್ನೆ ಪತ್ರಿಕೆ ತಯಾರಿಕಾ ಸಮಿತಿಯ ಸದಸ್ಯೆ, ಉಪನ್ಯಾಸಕಿ ಮನಿಷಾ ಗುರುನಾಥ್ ಅವರನ್ನ ಕೋರ್ಟ್ ಇಂದು 14 ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ.
ಸಮಿತಿಯಲ್ಲೇ ಇದ್ದು ಕೃತ್ಯ ಎಸಗಿದ ಆರೋಪಿ: ಬಂಧಿತ ಮನಿಷಾ ಗುರುನಾಥ್ ಮಹಾರಾಷ್ಟ್ರದ ಪುಣೆಯ ಕಾಲೇಜೊಂದರಲ್ಲಿ ಸಸ್ಯಶಾಸ್ತ್ರ (Botany) ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಶೈಕ್ಷಣಿಕ ಹಿನ್ನೆಲೆಯನ್ನು ಪರಿಗಣಿಸಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಇವರನ್ನು ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ತಯಾರಿಸುವ ತಜ್ಞರ ಸಮಿತಿಗೆ ನೇಮಕ ಮಾಡಿತ್ತು. ಅತ್ಯಂತ ಗೌಪ್ಯವಾಗಿಡಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿದ್ದೂ ಇವರು ಪ್ರಶ್ನೆ ಪತ್ರಿಕೆ ಸೋರಿಕೆ ಜಾಲದೊಂದಿಗೆ ಕೈಜೋಡಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಸಿಬಿಐನಿಂದ ತೀವ್ರ ವಿಚಾರಣೆ ಸಾಧ್ಯತೆ: ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಹಂತದಲ್ಲಿಯೇ ಸೋರಿಕೆ ಹೇಗೆ ನಡೆಯಿತು? ಇದರ ಹಿಂದೆ ಎಷ್ಟು ಕೋಟಿ ರೂಪಾಯಿಗಳ ವ್ಯವಹಾರ ನಡೆದಿದೆ? ಮತ್ತು ಈ ಜಾಲದಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಇತರ ಉನ್ನತ ಅಧಿಕಾರಿಗಳು ಶಾಮೀಲಾಗಿದ್ದಾರೆಯೇ? ಎಂಬ ಪ್ರಮುಖ ಅಂಶಗಳ ಕುರಿತು ಸಿಬಿಐ ಅಧಿಕಾರಿಗಳು ಈಗ ಮನಿಷಾಳನ್ನು ಕಸ್ಟಡಿಗೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ.
ಇಲ್ಲಿಯವರೆಗೆ ಒಟ್ಟು 9 ಮಂದಿ ಅರೆಸ್ಟ್: ಈ ಹಗರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಪ್ರಮುಖ ಸೂತ್ರಧಾರಿಗಳು ಸೇರಿದಂತೆ ದೇಶದ ವಿವಿಧೆಡೆ ದಾಳಿ ನಡೆಸಿವೆ. ಸದ್ಯ ಉಪನ್ಯಾಸಕಿ ಮನಿಷಾ ಗುರುನಾಥ್ ಬಂಧನದೊಂದಿಗೆ ಈ ಹಗರಣದಲ್ಲಿ ಭಾಗಿಯಾದ ಒಟ್ಟು 9 ಆರೋಪಿಗಳನ್ನು ಇದುವರೆಗೆ ಬಂಧಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಪ್ರಭಾವಿಗಳ ಬಂಧನವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.








