ವಾಷಿಂಗ್ಟನ್: ಜಾಗತಿಕ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ISIS) ಗೆ ಅಮೆರಿಕ ಮತ್ತು ನೈಜೀರಿಯಾ ಸೇನೆಗಳು ಜಂಟಿಯಾಗಿ ಭಾರಿ ಆಘಾತ ನೀಡಿವೆ. ಐಸಿಸ್ ಸಂಘಟನೆಯ ಜಾಗತಿಕ ಮಟ್ಟದ ಎರಡನೇ ಅತ್ಯುನ್ನತ ಕಮಾಂಡರ್ (Second-in-Command) ಆಗಿದ್ದ ಭೀಕರ ಉಗ್ರ ಅಬು ಬಿಲಾಲ್ ಅಲ್-ಮಿನುಕಿ (Abu-Bilal al-Minuki) ನನ್ನು ಜಂಟಿ ಸೈನಿಕ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಮಟ್ಟಹಾಕಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಖಚಿತಪಡಿಸಿದ್ದಾರೆ.
ಪಶ್ಚಿಮ ಆಫ್ರಿಕಾ ಮತ್ತು ಸಾಹೇಲ್ ವಲಯದಲ್ಲಿ ಐಸಿಸ್ ನೆಟ್ವರ್ಕ್ ಅನ್ನು ಮುನ್ನಡೆಸುತ್ತಿದ್ದ ಹಾಗೂ ಜಾಗತಿಕವಾಗಿ ಉಗ್ರರಿಗೆ ಧನಸಹಾಯ ಮತ್ತು ಮಾರ್ಗದರ್ಶನ ನೀಡುತ್ತಿದ್ದ ಪ್ರಮುಖ ಸೂತ್ರಧಾರನನ್ನು ಹೊಡೆದುರುಳಿಸಿರುವುದು ಭಯೋತ್ಪಾದನೆ ನಿಗ್ರಹ ಹೋರಾಟದಲ್ಲಿ ಸಿಕ್ಕಿದ ದೊಡ್ಡ ಯಶಸ್ಸು ಎಂದು ವಿಶ್ಲೇಷಿಸಲಾಗಿದೆ.
ಜಂಟಿ ಕಾರ್ಯಾಚರಣೆ ನಡೆದಿದ್ದು ಹೇಗೆ?
ಕೇಂದ್ರ ಆಫ್ರಿಕಾದ ನೈಜೀರಿಯಾ ಮತ್ತು ಲೇಕ್ ಚಾಡ್ ಗಡಿ ವಲಯದಲ್ಲಿ ಈ ಹೈ-ಪ್ರೊಫೈಲ್ ಕಾರ್ಯಾಚರಣೆ ನಡೆದಿದೆ. ಅಮೆರಿಕದ ವಿಶೇಷ ಪಡೆಗಳು (US Special Forces) ಮತ್ತು ನೈಜೀರಿಯಾ ಸೇನೆಯು ಅತ್ಯಂತ ರಹಸ್ಯವಾಗಿ ಈ ದಾಳಿಯನ್ನು ಸಂಘಟಿಸಿದ್ದವು.
ಖಚಿತ ಮಾಹಿತಿ ಆಧಾರಿತ ದಾಳಿ: ಅಲ್-ಮಿನುಕಿ ಅಡಗಿರುವ ನಿಖರವಾದ ತಾಣದ ಬಗ್ಗೆ ಇಂಟೆಲಿಜೆನ್ಸ್ ಸಂಸ್ಥೆಗಳಿಂದ ಮಾಹಿತಿ ಲಭ್ಯವಾದ ಬೆನ್ನಲ್ಲೇ ಸೈನಿಕರು ಸುತ್ತುವರೆದಿದ್ದರು. ಈ ವೇಳೆ ನಡೆದ ತೀವ್ರ ಗುಂಡಿನ ಚಕಮಕಿಯಲ್ಲಿ ಈ ಮೋಸ್ಟ್ ವಾಂಟೆಡ್ ಉಗ್ರ ಹತನಾಗಿದ್ದಾನೆ.
ಅಮೆರಿಕದಿಂದ ಮೊದಲೇ ಬಿದ್ದಿತ್ತು ಮುದ್ರೆ: ಅಬು ಬಿಲಾಲ್ ಅಲ್-ಮಿನುಕಿಯ ಭೀಕರ ಚಟುವಟಿಕೆಗಳನ್ನು ಗಮನಿಸಿದ್ದ ಅಮೆರಿಕ ವಿದೇಶಾಂಗ ಇಲಾಖೆಯು ಆತನನ್ನು ಈ ಹಿಂದೆ ಜಾಗತಿಕ ಭಯೋತ್ಪಾದಕ (Specially Designated Global Terrorist – SDGT) ಎಂದು ಘೋಷಿಸಿತ್ತು.








