ಕೊಪ್ಪಳ: ಜಿಲ್ಲೆಯ ಮುನಿರಾಬಾದ್ ಬಳಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಚಲಿಸುತ್ತಿದ್ದ ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಸೇತುವೆಯ ಮೇಲಿಂದ ಕೆಳಗೆ ಬಿದ್ದಿದೆ. ಈ ದಾರುಣ ಘಟನೆಯಲ್ಲಿ ಒಂದು ಮಗು ಸೇರಿದಂತೆ ಒಂದೇ ಕುಟುಂಬದ ಏಳು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತುಂಗಭದ್ರಾ ಸೇತುವೆಯ ಮೇಲೆ ಈ ಹೃದಯವಿದ್ರಾವಕ ಘಟನೆ ನಡೆದಿದೆ.
ಅಪಘಾತದ ತೀವ್ರತೆಗೆ ಟ್ರ್ಯಾಕ್ಟರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲಿ ಕರುಣಾಜನಕ ದೃಶ್ಯ ನಿರ್ಮಾಣವಾಗಿತ್ತು. ಸದ್ಯಕ್ಕೆ ಏಳು ಜನರು ಮೃತಪಟ್ಟಿರುವುದು ದೃಢಪಟ್ಟಿದ್ದು, ಟ್ರ್ಯಾಕ್ಟರ್ನಲ್ಲಿದ್ದ ಇನ್ನುಳಿದ ಹಲವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಮೃತಪಟ್ಟ ದುರ್ದೈವಿಗಳು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರಲಯನಹಳ್ಳಿ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಒಂದೇ ಕುಟುಂಬದ ಸದಸ್ಯರು ಮತ್ತು ಅವರ ಸಂಬಂಧಿಕರು ಸೇರಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಪ್ಪಳದ ಹುಲಿಗಮ್ಮ ದೇವಸ್ಥಾನಕ್ಕೆ ಹರಕೆ ತೀರಿಸಲು ಮತ್ತು ದರ್ಶನ ಪಡೆಯಲು ಟ್ರ್ಯಾಕ್ಟರ್ನಲ್ಲಿ ಹೊರಟಿದ್ದಾಗ ಈ ವಿಧಿಲಿಖಿತ ದುರಂತ ಸಂಭವಿಸಿದೆ.
ದೇವರ ದರ್ಶನ ಪಡೆದು ಪುನೀತರಾಗಬೇಕಾಗಿದ್ದ ಭಕ್ತರು, ದಾರಿ ಮಧ್ಯೆಯೇ ಇಹಲೋಕ ತ್ಯಜಿಸಿರುವುದು ಮರಲಯನಹಳ್ಳಿ ಗ್ರಾಮದಲ್ಲಿ ಕತ್ತಲು ಆವರಿಸುವಂತೆ ಮಾಡಿದೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಮುನಿರಾಬಾದ್ ಠಾಣೆ ಪೋಲಿಸರು ಹಾಗೂ ವಿಜಯನಗರ ಠಾಣೆ ಪೋಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯರ ನೆರವಿನೊಂದಿಗೆ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.








