ನವದೆಹಲಿ: ಬ್ಯಾಂಕ್ ಖಾತೆಯು ಒಬ್ಬ ವ್ಯಕ್ತಿಯ ಆರ್ಥಿಕ ಅಸ್ತಿತ್ವದ ಅತ್ಯಗತ್ಯ ಭಾಗವಾಗಿದೆ. ಯಾವುದೇ ಆರೋಪ, ಎಫ್ಐಆರ್ ಅಥವಾ ನ್ಯಾಯಾಂಗದ ಆದೇಶವಿಲ್ಲದೆ ಒಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸುವುದು (Freeze) ಸರಿಯಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಗುಜರಾತ್ ಸೈಬರ್ ಕ್ರೈಂ ಪೊಲೀಸರ ದೂರಿನ ಮೇರೆಗೆ ಖಾಸಗಿ ಬ್ಯಾಂಕ್ ಒಂದರಲ್ಲಿದ್ದ ತಮ್ಮ ಖಾತೆಯನ್ನು ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಈ ತೀರ್ಪು ನೀಡಿದ್ದಾರೆ.
ಅರ್ಜಿದಾರರಿಗೂ ಮತ್ತು ಯಾವುದೇ ಅಪರಾಧಕ್ಕೂ ಸಂಬಂಧವಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ, ಅವರ ಖಾತೆಯನ್ನು ತಕ್ಷಣವೇ ‘ಡಿ-ಫ್ರೀಜ್’ (Defreeze) ಮಾಡುವಂತೆ ಬ್ಯಾಂಕ್ಗೆ ನ್ಯಾಯಾಲಯ ಸೂಚಿಸಿದೆ. ಯಾವುದೇ ಸಮರ್ಥನೆ ಇಲ್ಲದೆ ಖಾತೆಯನ್ನು ಸ್ಥಗಿತಗೊಳಿಸುವುದು ವ್ಯಕ್ತಿಯ ಬದುಕುವ ಹಕ್ಕಿಗೆ ಅಡ್ಡಿಪಡಿಸಿದಂತಾಗುತ್ತದೆ. ಇದು ಸಂಪೂರ್ಣವಾಗಿ ಅನಿಯಂತ್ರಿತ ಮತ್ತು ಕಾನೂನುಬಾಹಿರ ಕ್ರಮ ಎಂದು ನ್ಯಾಯಾಲಯ ಹೇಳಿದೆ.
ರೋಮನ್ ನ್ಯಾಯಶಾಸ್ತ್ರಜ್ಞ ಮತ್ತು ದಾರ್ಶನಿಕ ಸಿಸೆರೊ ಅವರ ಮಾತುಗಳನ್ನು ಉಲ್ಲೇಖಿಸಿದ ನ್ಯಾಯಾಲಯ, “ಬ್ಯಾಂಕ್ ಖಾತೆ ಕೇವಲ ಹಣ ಇಡುವ ಜಾಗವಲ್ಲ, ಅದು ವ್ಯಕ್ತಿಯ ಆರ್ಥಿಕ ಅಸ್ತಿತ್ವ. ಒಬ್ಬ ವ್ಯಕ್ತಿ ನಿರಪರಾಧಿಯಾಗಿದ್ದರೂ ಕೇವಲ ಅನುಮಾನದ ಆಧಾರದ ಮೇಲೆ ಅವನ ಆರ್ಥಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟಿದೆ.
ನವೆಂಬರ್ 2024ರಲ್ಲಿ ಗುಜರಾತ್ ಪೊಲೀಸರು ನೀಡಿದ ದೂರಿನ ಹಿನ್ನೆಲೆಯಲ್ಲಿ ಅರ್ಜಿದಾರರ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಅರ್ಜಿದಾರರ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿರಲಿಲ್ಲ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಸಂತ್ರಸ್ತನಿಗೆ ಪರಿಹಾರ ನೀಡಿದೆ.








