ವಿಜಯಪುರ: ಜಿಲ್ಲೆಯಲ್ಲಿ ವರುಣನ ಅಬ್ಬರಕ್ಕೆ ಘೋರ ದುರಂತವೊಂದು ಸಂಭವಿಸಿದೆ. ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಮನೆಯ ಮೇಲ್ಚಾವಣಿ ಕುಸಿದು ಬಿದ್ದ ಪರಿಣಾಮ, ಒಂದೇ ಕುಟುಂಬದ ನಾಲ್ವರು ಮಲಗಿದ್ದಲ್ಲೇ ಜೀವಂತ ಸಮಾಧಿಯಾಗಿರುವ ಹೃದಯವಿದ್ರಾವಕ ಘಟನೆ ಆಲಮೇಲ ತಾಲೂಕಿನ ಮೊರಟಗಿ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟವರನ್ನು ಗುರುನಾಥ ಬಡಿಗೇರ್ (35), ಅವರ ಪತ್ನಿ ಜ್ಯೋತಿ ಬಡಿಗೇರ್ (28), ಹಾಗೂ ಮಕ್ಕಳಾದ ಕಾಳಮ್ಮ ಬಡಿಗೇರ್ (13) ಮತ್ತು ಕೀರ್ತಿ ಬಡಿಗೇರ್ (9) ಎಂದು ಗುರುತಿಸಲಾಗಿದೆ.
ಮೃತ ಗುರುನಾಥ್ ಅವರು ತಮ್ಮ ಸ್ವಂತ ಮನೆಯನ್ನು ದುರಸ್ತಿಗೊಳಿಸುತ್ತಿದ್ದರು. ಈ ಕಾರಣಕ್ಕಾಗಿ ಕಳೆದ ಕೆಲವು ದಿನಗಳಿಂದ ಗ್ರಾಮದ ಹಳೆಯ ಮನೆಯೊಂದರಲ್ಲಿ ಬಾಡಿಗೆಗೆ ವಾಸವಿದ್ದರು.
ಗುರುವಾರ ರಾತ್ರಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರೀ ಮಳೆ ಸುರಿದಿದೆ. ಈ ವೇಳೆ ಹಳೆಯ ಮನೆಯ ಮೇಲ್ಚಾವಣಿ ಮಳೆಯ ಆರ್ಭಟಕ್ಕೆ ತತ್ತರಿಸಿ ಏಕಾಏಕಿ ಕುಸಿದು ಬಿದ್ದಿದೆ. ಗಾಢ ನಿದ್ರೆಯಲ್ಲಿದ್ದ ಕುಟುಂಬದ ಸದಸ್ಯರು ಹೊರಬರಲಾಗದೆ ಅವಶೇಷಗಳ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಪೊಲೀಸರ ಭೇಟಿ:
ವಿಷಯ ತಿಳಿಯುತ್ತಿದ್ದಂತೆ ಸಿಂದಗಿ ಠಾಣೆಯ ಪೊಲೀಸರು ಗ್ರಾಮಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಗ್ರಾಮದಲ್ಲಿ ಸದ್ಯ ಶೋಕದ ಛಾಯೆ ಆವರಿಸಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.








