ನವದೆಹಲಿ:ದೇಶದ ವಿದೇಶಿ ವಿನಿಮಯ ಮೀಸಲು ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಇಂಧನ ಬಳಕೆಯನ್ನು ಮಿತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಗುರುವಾರ (ಮೇ 14) ದೆಹಲಿ ಸರ್ಕಾರವು ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ವಾರಕ್ಕೆ ಎರಡು ದಿನ ‘ವರ್ಕ್ ಫ್ರಮ್ ಹೋಮ್’ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ವರ್ಕ್ ಫ್ರಮ್ ಹೋಮ್ (WFH) ಸಲಹೆ ನೀಡಿರುವ ರಾಜ್ಯಗಳ ಪಟ್ಟಿ:
1. ದೆಹಲಿ:
ದೆಹಲಿಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳು ವಾರದಲ್ಲಿ ಎರಡು ದಿನ ಮನೆಯಿಂದಲೇ ಕೆಲಸ ಮಾಡುವುದು ಈಗ ಕಡ್ಡಾಯ.
ಕಚೇರಿಯ ಶೇ. 50 ರಷ್ಟು ಸಭೆಗಳನ್ನು ಆನ್‌ಲೈನ್ ಮೂಲಕವೇ ನಡೆಸಬೇಕು.
ಅತ್ಯಗತ್ಯವಿದ್ದಲ್ಲಿ ಮಾತ್ರ ಅಧಿಕೃತ ಪ್ರಯಾಣ ಕೈಗೊಳ್ಳಲು ಸೂಚಿಸಲಾಗಿದೆ. ಡಿಜಿಟಲ್ ಸಂವಹನ, ವರ್ಚುವಲ್ ತಪಾಸಣೆ ಮತ್ತು ಆನ್‌ಲೈನ್ ತರಬೇತಿಗಳಿಗೆ ಆದ್ಯತೆ ನೀಡುವಂತೆ ಸರ್ಕಾರ ತಿಳಿಸಿದೆ.
2. ಮಹಾರಾಷ್ಟ್ರ:
ಮಹಾರಾಷ್ಟ್ರ ಸರ್ಕಾರ ಕೂಡ ಇಂಧನ ಉಳಿತಾಯದ ಗುರಿ ಹೊಂದಿದ್ದು, ಈಗಾಗಲೇ ಹಲವು ಇಲಾಖೆಗಳ ಸಭೆಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತಿದೆ ಎಂದು ಕಂದಾಯ ಸಚಿವ ಚಂದ್ರಶೇಖರ್ ಬಾವಂಕುಲೆ ತಿಳಿಸಿದ್ದಾರೆ.
ಮೀನುಗಾರಿಕೆ ಮತ್ತು ಬಂದರು ಸಚಿವ ನಿತೇಶ್ ರಾಣೆ ಅವರು, ಅಧಿಕಾರಿಗಳು ವರ್ಚುವಲ್ ಸಭೆಗಳಿಗೆ ಒತ್ತು ನೀಡಬೇಕು ಮತ್ತು ಪೆಟ್ರೋಲ್-ಡೀಸೆಲ್ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳನ್ನು ಬಳಸಬೇಕು ಎಂದು ಸೂಚಿಸಿದ್ದಾರೆ.
3. ಉತ್ತರ ಪ್ರದೇಶ (UP):
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಲ್ಲಾ ಇಲಾಖೆಗಳ ಆಂತರಿಕ ಸಭೆಗಳಲ್ಲಿ ಅರ್ಧದಷ್ಟು ಸಭೆಗಳನ್ನು ವರ್ಚುವಲ್ ಆಗಿ ನಡೆಸಲು ಸೂಚಿಸಿದ್ದಾರೆ.
ಸಾಧ್ಯವಿರುವ ಕಡೆಗಳಲ್ಲಿ ಉದ್ಯೋಗಿಗಳು ವಾರಕ್ಕೆ ಕನಿಷ್ಠ ಎರಡು ದಿನ ಮನೆಯಿಂದಲೇ ಕೆಲಸ ಮಾಡುವಂತೆ ಅವರು ಸಲಹೆ ನೀಡಿದ್ದಾರೆ.
4. ಪಶ್ಚಿಮ ಬಂಗಾಳ:
ಪಶ್ಚಿಮ ಬಂಗಾಳದ ರಾಜ್ಯಪಾಲ ಆರ್.ಎನ್. ರವಿ ಅವರು ಪ್ರಧಾನಿ ಮೋದಿಯವರ ಈ ಪ್ರಯತ್ನಕ್ಕೆ ಕೈಜೋಡಿಸುವಂತೆ ಜನತೆಗೆ ಮನವಿ ಮಾಡಿದ್ದಾರೆ.
ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಕಚೇರಿಗಳು ಸಾಧ್ಯವಿರುವಲ್ಲೆಲ್ಲಾ ವರ್ಚುವಲ್ ಸಭೆ ಮತ್ತು ‘ವರ್ಕ್ ಫ್ರಮ್ ಹೋಮ್’ ಅಭ್ಯಾಸವನ್ನು ಪ್ರೋತ್ಸಾಹಿಸುವ ಮೂಲಕ ರಾಷ್ಟ್ರೀಯ ಸಂಪನ್ಮೂಲ ಸಂರಕ್ಷಣೆಗೆ ಕೊಡುಗೆ ನೀಡಬೇಕು ಎಂದು ಅವರು ‘X’ ನಲ್ಲಿ ಪೋಸ್ಟ್ ಮಾಡಿದ್ದಾರೆ.








