ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಹಾಗೂ ಬಯಲುಸೀಮೆಯ ಕೆಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಅಂಡಮಾನ್-ನಿಕೋಬಾರ್ ದ್ವೀಪದಲ್ಲಿನ ಮೋಡಗಳ ಕಾರಣದಿಂದಾಗಿ ಮುಂದಿನ 4 ದಿನಗಳ ಕಾಲ ರಾಜ್ಯದಲ್ಲಿ ಮಳೆ ಬಿರುಸಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುರುವಾರ ಮಳೆಯ ರೌದ್ರಾವತಾರ ಮುಂದುವರಿದಿದ್ದು, ಸಿಡಿಲು ಬಡಿದು ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಒಟ್ಟು ಏಳು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಸಾರ್ವಜನಿಕ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ದಾವಣಗೆರೆ ಜಿಲ್ಲೆಯ ಮುದಹದಡಿ ಗ್ರಾಮದಲ್ಲಿ ಕುರಿಗಾಹಿ ಅಜಯ್ ದುಂಡಪ್ಪ ಬಿ.ಗವನಾಳ್ (19) ಎಂಬ ಯುವಕ ಮಳೆಯಿಂದ ರಕ್ಷಣೆ ಪಡೆಯಲು ಮರದಡಿ ನಿಂತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಕುಂದಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ-66ರ ಅರಾಟೆ ಸೇತುವೆ ದುರಸ್ತಿ ಕೆಲಸ ಮಾಡುತ್ತಿದ್ದ ಪಂಜಾಬ್ ಮೂಲದ ಕಾರ್ಮಿಕ ಅಶುತೋಷ್ (35) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಕಾರ್ಮಿಕ ಲವಜೋತ್ ಸಿಂಗ್ (28) ಗಾಯಗೊಂಡಿದ್ದಾರೆ.
ಉಡುಪಿ, ಯಾದಗಿರಿ, ಹಾವೇರಿ, ಕೊಡಗು, ಶಿವಮೊಗ್ಗ, ದಾವಣಗೆರೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾರಿ ಮಳೆಯ ಕಾರಣ ರನ್-ವೇ ಕಾಣಿಸದಂತಾಗಿ ಎರಡು ವಿಮಾನಗಳ ಹಾರಾಟ ವಿಳಂಬವಾಯಿತು.ಕೊಡಗಿನ ವಿರಾಜಪೇಟೆ-ಮಡಿಕೇರಿ ಮುಖ್ಯ ರಸ್ತೆಯಲ್ಲಿ ಮರ ಬಿದ್ದು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮಂಗಳೂರು ಮತ್ತು ಮೈಸೂರಿನಲ್ಲೂ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.ಯಾದಗಿರಿ, ಶಹಾಪುರ ಸೇರಿದಂತೆ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಏರುಪೇರಾಗಿದೆ.








