ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಮೇ 14ರಿಂದ 17ರವರೆಗೆ ನಡೆಯಲಿರುವ ಇಎಲ್‌ಎಎಸ್‌ಐಎ 2026 ಭಾಗವಾದ ರಿನ್ಯೂವೆಬಲ್ ಏಷ್ಯಾ ಅಂಡ್ ಎನರ್ಜಿ ಎಕ್ಸ್‌ಪೋದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ರಾಜ್ಯದ ನವೀಕರಿಸಬಹುದಾದ ಇಂಧನ ವಲಯದ ನಾವೀನ್ಯತೆಗಳು ಮತ್ತು ಇತರ ಉಪಕ್ರಮಗಳನ್ನು ಪ್ರದರ್ಶಿಸುತ್ತಿದೆ.
ಎಕ್ಸ್‌ಪೋದಲ್ಲಿ ಸ್ಟಾಲ್ ತೆರೆದಿರುವ ಕ್ರೆಡಲ್- ನವೀಕರಿಸಬಹುದಾದ ಇಂಧನ ಪರಿವರ್ತನೆಗಳು, ವಿವಿಧ ಉಪಕ್ರಮಗಳು, ನಾವಿನ್ಯತೆ ಮತ್ತು ತಾಂತ್ರಿಕ ಪ್ರಗತಿಯನ್ನು ಪ್ರದರ್ಶಿಸುತ್ತಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಸುಸ್ಥಿರ ಇಂಧನ ಪರಿಹಾರಗಳನ್ನು ಉತ್ತೇಜಿಸುವ ಜತೆಗೆ ಇಂಧನ ಭದ್ರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕ್ರೆಡಲ್‌ನ ಬದ್ಧತಯನ್ನು ಈ ಮೂಲಕ ಎತ್ತಿ ಹಿಡಿಯಲಾಗುತ್ತಿದೆ.
ಸೌರ-ಪವನ ಹೈಬ್ರಿಡ್ ಪಾರ್ಕ್ ಗಳು, ಬ್ಯಾಟರಿ ಇಂಧನ ಸಂಗ್ರಹಣಾ ವ್ಯವಸ್ಥೆಗಳು ಮತ್ತು ಗ್ರೀನ್ ಹೈಡ್ರೋಜನ್‌ನ ಪ್ರಾಯೋಗಿಕ ಯೋಜನೆಗಳ ಮೂಲಕ ಹೊಸ ಆವಿಷ್ಕಾರಗಳನ್ನು ಕ್ರೆಡಲ್ ಉತ್ತೇಜಿಸುತ್ತಿದೆ. ಈ ಕ್ರಮಗಳು ಕೇವಲ ಸಾಮರ್ಥ್ಯ ವೃದ್ಧಿಗಷ್ಟೇ ಸೀಮಿತವಾಗಿರದೆ, ಭವಿಷ್ಯದ ಇಂಧನ ವ್ಯವಸ್ಥೆಯನ್ನು ನಿರ್ಮಿಸುವ ಗುರಿ ಹೊಂದಿದೆ.
ಎಕ್ಸ್‌ಪೋದಲ್ಲಿ ಕ್ರೆಡಲ್ ಪಾತ್ರದ ಬಗ್ಗೆ ಮಾತನಾಡಿರುವ ಕ್ರೆಡಲ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ,”ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರ ನೇತೃತ್ವ ಹಾಗೂ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರ ಮಾರ್ಗದರ್ಶನದಲ್ಲಿ ಕ್ರೆಡಲ್ ರಾಜ್ಯಾದ್ಯಂತ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ವಿಸ್ತರಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ರಾಜ್ಯದ ಈ ಪ್ರಗತಿ ಸೌರ ಮತ್ತು ಪವನ ವಿದ್ಯುತ್ ಯೋಜನೆಗಳ ಅನುಷ್ಠಾನಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಹೈಬ್ರಿಡ್ ಇಂಧನ ವ್ಯವಸ್ಥೆಗಳು ಹಾಗೂ ಇಂಧನ ಸಂಗ್ರಹಣಾ ಪರಿಹಾರಗಳತ್ತವೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ,” ಎಂದು ಹೇಳಿದರು.
“ಎಕ್ಸ್‌ಪೋದಲ್ಲಿ ಭಾಗವಹಿಸುವ ಮೂಲಕ, ನವೀಕರಿಸಬಹುದಾದ ಇಂಧನ ವಲಯದಲ್ಲಿ ರಾಜ್ಯದ ಸಾಧನೆಗಳನ್ನು ಪ್ರದರ್ಶಿಸುವ ಉದ್ದೇಶ ನಮ್ಮದು. ರಾಜ್ಯದ ಸುಸ್ಥಿರ ಇಂಧನ ಭವಿಷ್ಯವನ್ನು ಮತ್ತಷ್ಟು ಬಲಪಡಿಸುವ ಸಹಯೋಗಗಳು ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಅನ್ವೇಷಣೆಗೂ ಇದರಿಂದ ನೆರವಾಗಲಿದೆ.ಸ್ಟಾಲ್‌ನಲ್ಲಿರುವ ಕ್ರೆಡಲ್ ಅಧಿಕಾರಿಗಳು ನವೀಕರಿಸಬಹುದಾದ ಇಂಧನ ವಲಯದ ಯೋಜನೆಗಳು, ನಿಯಮಿತದ ಸೇವೆಗಳು ಮತ್ತು ತಾಂತ್ರಿಕ ಅನುಷ್ಠಾನಗಳ ಬಗ್ಗೆ ಸಂದರ್ಶಕರಿಗೆ ಮಾಹಿತಿ ಒದಗಿಸುತ್ತಿದ್ದಾರೆ,” ಎಂದು ಅವರು ಹೇಳಿದರು.
ರಿನ್ಯೂವೆಬಲ್ ಏಷ್ಯಾ ಅಂಡ್ ಎನರ್ಜಿ ಎಕ್ಸ್‌ಪೋ
ದೇಶ ಹಾಗೂ ವಿದೇಶಗಳ ಪಾಲುದಾರರು ಭಾಗಿಯಾಗಿರುವ ರಿನ್ಯೂವೆಬಲ್ ಏಷ್ಯಾ ಅಂಡ್ ಎನರ್ಜಿ ಎಕ್ಸ್‌ಪೋ- ನವೀಕರಿಸಬಹುದಾದ ಇಂಧನ, ಇಂಧನ ದಕ್ಷತೆ ಮತ್ತು ಮುಂದಿನ ಪೀಳಿಗೆಯ ವಿದ್ಯುತ್ ಪರಿಹಾರಗಳಲ್ಲಿನ ಪ್ರಗತಿಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ. ಎಕ್ಸಪೋದಲ್ಲಿ ಕರ್ನಾಟಕವು ತನ್ನ ಹೈಬ್ರಿಡ್ ಇಂಧನ, ಶೇಖರಣಾ ವ್ಯವಸ್ಥೆ ಮತ್ತು ನೀತಿ ನಾವೀನ್ಯತೆಯಲ್ಲಿ ಪ್ರಸ್ತುತಪಡಿಸುತ್ತದೆ.








