ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಗ್ರಾಹಕರ ನಿದ್ದೆಗೆಡಿಸಿದೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಚಿನ್ನ ಖರೀದಿ ಮಾಡಬೇಡಿ ಮತ್ತು ಅಡುಗೆ ಎಣ್ಣೆ ಬಳಕೆ ಕಡಿಮೆ ಮಾಡಿ ಎಂದು ನೀಡಿದ್ದ ಕರೆಯ ಬೆನ್ನಲ್ಲೇ, ಮಾರುಕಟ್ಟೆಯಲ್ಲಿ ದಿಢೀರ್ ಬದಲಾವಣೆಗಳಾಗಿವೆ. ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಕೆ ಕಂಡುಬಂದ ಬೆನ್ನಲ್ಲೇ, ಈಗ ಅಕ್ಕಿ ಮತ್ತು ಅಡುಗೆ ಎಣ್ಣೆಯ ದರವೂ ಗಗನಕ್ಕೇರುತ್ತಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅಕ್ಕಿ ದರದಲ್ಲಿ ಭಾರಿ ಏರಿಕೆ: ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಹೋಲ್ ಸೆಲ್ ಮತ್ತು ರಿಟೇಲ್ ಎರಡೂ ವಿಭಾಗಗಳಲ್ಲಿ ಗ್ರಾಹಕರಿಗೆ ಬಿಸಿ ತಟ್ಟಿದೆ. ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಅಕ್ಕಿಗೆ ಸುಮಾರು 4 ರಿಂದ 5 ರೂಪಾಯಿ ಹೆಚ್ಚಳವಾಗಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಇದು ಬರೋಬ್ಬರಿ 8 ರಿಂದ 10 ರೂಪಾಯಿ ತನಕ ಏರಿಕೆಯಾಗುವ ಸಾಧ್ಯತೆ ಇದೆ. ಈ ಹಿಂದೆ ಇದ್ದ ದರಕ್ಕೆ ಹೋಲಿಸಿದರೆ, 25 ಕೆಜಿಯ ಅಕ್ಕಿ ಚೀಲದ ದರದಲ್ಲಿ ಸುಮಾರು 55 ರಿಂದ 60 ರೂಪಾಯಿಗಳಷ್ಟು ಹೆಚ್ಚಳ ಕಂಡುಬಂದಿದೆ.
ಬಿಸಿಯಾಗುತ್ತಿದೆ ಅಡುಗೆ ಎಣ್ಣೆ: ಕೇವಲ ಅಕ್ಕಿ ಮಾತ್ರವಲ್ಲದೆ, ಅಡುಗೆ ಎಣ್ಣೆಯ ದರವೂ ಸಹ ಏರುಗತಿಯಲ್ಲಿದೆ. ಸೂರ್ಯಕಾಂತಿ ಎಣ್ಣೆಯ ಬೆಲೆ ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಳವಾಗಿದೆ. ಇದು ಸಣ್ಣ ಪ್ರಮಾಣದಂತೆ ಕಂಡರೂ, ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುವವರಿಗೆ ಹೊರೆಯಾಗುತ್ತಿದೆ. 10 ಲೀಟರ್ ಎಣ್ಣೆಯ ಬಾಕ್ಸ್ ಬೆಲೆಯಲ್ಲಿ 20 ರೂಪಾಯಿ ಏರಿಕೆಯಾಗಿದ್ದರೆ, 16.5 ಲೀಟರ್‌ನ ಒಂದು ಟಿನ್ ಎಣ್ಣೆಯ ಮೇಲೆ ಬರೋಬ್ಬರಿ 50 ರೂಪಾಯಿಗಳಷ್ಟು ದರ ಜಾಸ್ತಿಯಾಗಿದೆ.
ಕಂಗಾಲಾದ ಮಧ್ಯಮ ವರ್ಗ: ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಇನ್ನೊಂದೆಡೆ ಪ್ರಮುಖ ದಿನಸಿ ಪದಾರ್ಥಗಳ ಕೊರತೆಯ ಭೀತಿ ಜನರನ್ನು ಆತಂಕಕ್ಕೀಡು ಮಾಡಿದೆ. ಹೋಟೆಲ್ ಉದ್ಯಮ ಮತ್ತು ಮಧ್ಯಮ ವರ್ಗದ ಕುಟುಂಬಗಳ ಬಜೆಟ್ ಈ ದರ ಏರಿಕೆಯಿಂದಾಗಿ ಸಂಪೂರ್ಣವಾಗಿ ಏರುಪೇರಾಗಿದೆ. ಹಬ್ಬದ ಸೀಸನ್ ಅಥವಾ ಮದುವೆ ಸಮಾರಂಭಗಳ ಸಂದರ್ಭದಲ್ಲಿ ಈ ರೀತಿಯ ಬೆಲೆ ಏರಿಕೆ ಕಂಡುಬಂದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.








