ಮಿಯಾಮಿ (ಅಮೆರಿಕ): ಅಮೆರಿಕದ ಫ್ಲೋರಿಡಾ ಪ್ರಾಂತ್ಯದ ಖ್ಯಾತ ಮಿಯಾಮಿ ಬೀಚ್ ಬಳಿಯ ‘ಹಾಲೋವರ್ ಸ್ಯಾಂಡ್‌ಬಾರ್’ (Haulover Sandbar) ಎಂಬಲ್ಲಿ ಪ್ರವಾಸಿ ಹಡಗೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 11 ಪ್ರವಾಸಿಗರು ಗಾಯಗೊಂಡಿದ್ದಾರೆ. ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಸ್ಫೋಟದ ತೀವ್ರತೆಗೆ ಹಲವು ಪ್ರಯಾಣಿಕರು ಸಮುದ್ರಕ್ಕೆ ಹಾರಿ ಬಿದ್ದಿದ್ದಾರೆ ಎಂದು ವರದಿಯಾಗಿದೆ.
ಚಾರ್ಟರ್ ಬೋಟ್‌ನಲ್ಲಿ ಪ್ರಯಾಣಿಕರು ಪಾರ್ಟಿ ಮೂಡ್‌ನಲ್ಲಿದ್ದಾಗ ಈ ಅನಿರೀಕ್ಷಿತ ಸ್ಫೋಟ ಸಂಭವಿಸಿದೆ. ಮಿಯಾಮಿ-ಡೇಡ್ ಅಗ್ನಿಶಾಮಕ ದಳವು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಹಡಗಿನ ಎಂಜಿನ್ ಸ್ಟಾರ್ಟ್ ಮಾಡುವ ಸಂದರ್ಭದಲ್ಲಿ ಸಂಭವಿಸಿದ ಗ್ಯಾಸ್ ಸೋರಿಕೆಯೇ (Gas Leak) ಈ ಸ್ಫೋಟಕ್ಕೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ. ಹಡಗಿನಲ್ಲಿದ್ದ ಪ್ರಯಾಣಿಕರೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಮೆರಿಕದ ಕರಾವಳಿ ಕಾವಲು ಪಡೆ (US Coast Guard) ಮತ್ತು ಫ್ಲೋರಿಡಾ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಆಯೋಗದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಸ್ಫೋಟದಿಂದಾಗಿ ಹಡಗಿನ ಕೆಲವು ಭಾಗಗಳು ಹಾನಿಗೊಳಗಾಗಿವೆ.








