ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಉತ್ತರ ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ಭಾರಿ ಏರಿಕೆ ಕಂಡಿದ್ದು, ಇನ್ನೂ ಕೆಲವು ಜಿಲ್ಲೆಗಳಲ್ಲಿ ಅಲಲ್ಲಿ ಮಳೆ ಆಗುತ್ತಿದೆ. ಇದೀಗ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹೌದು ರಾಜ್ಯದಲ್ಲಿ ಬಿಸಿಲ ಝಳದ ಮಧ್ಯ ಮಳೆಯ ಸಿಂಚನವಾಗುತ್ತಿದೆ. ದಕ್ಷಿಣ ಒಳನಾಡಿನಲ್ಲಿ 5 ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಮಳೆ ಸುರಿಯಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಶುಷ್ಕ ವಾತಾವರಣ ಮುಂದುವರಿಯಲಿದೆ. ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಇಂದು ಸಹ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಅರಬ್ಬಿ ಸಮುದ್ರದ ಕೇರಳದ ಆಗ್ನೇಯ ಕರಾವಳಿ ಹೊಂದಿಕೊಂಡಂತೆ ಲಕ್ಷದ್ವೀಪದಲ್ಲಿ 1.5 ಕಿ.ಮೀ. ಎತ್ತರದಲ್ಲಿ ಹಾಗೂ ಕೊಮೊರಿನ್ ಪ್ರದೇಶದ ಮೇಲ್ಭಾಗದಲ್ಲಿ ಸುಮಾರು 5.8 ಕಿ.ಮೀ. ಎತ್ತರದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿದೆ. ಕೇರಳ ಕರಾವಳಿ, ಕರಾವಳಿ ಕರ್ನಾಟಕ, ಒಳನಾಡು ಕರ್ನಾಟಕದಿಂದ ಹಿಡಿದು ಮಹಾರಾಷ್ಟ್ರದವರೆಗೆ 0.9ಕಿಮೀ ಎತ್ತರದಲ್ಲಿ ವಾಯು ಚಂಡಮಾರುತ ಪರಿಚಲನೆ ಉಂಟಾಗಿದೆ. ಈ ಕಾರಣಕ್ಕೆ ವಿವಿಧೆಡೆ ವ್ಯಾಪಕ ಮಳೆ ನಿರೀಕ್ಷೆ ಇದೆ.








