ಬೆಂಗಳೂರು : ಅಪ್ರಾಪ್ತ ವಯಸ್ಸಿನಲ್ಲಿದ್ದಾಗ ಎಸಗಿರುವ ಅಪರಾಧಗಳನ್ನು ಆಧಾರವಾಗಿಟ್ಟುಕೊಂಡು ಗೂಂಡಾ ಕಾಯಿದೆಯಡಿ ಮುನ್ನೆಚ್ಚರಿಕಾ ಕ್ರಮವಾಗಿ ಬಂಧನ ಆದೇಶ ಹೊರಡಿಸಲು ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ಬಂಧಿತರಾಗಿರುವ ಅಭಿಚೆರ್ಲಿ ಅಲಿಯಾಸ್ ಅಭಿ ಎಂಬುವವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಸೂಚನೆ ನೀಡಿದೆ.
ತಮ್ಮ ಮಗನನ್ನು ಬಂಧಿಸಿರುವ ಆದೇಶವನ್ನು ಪ್ರಶ್ನಿಸಿ ಕೋಲಾರ ಜಿಲ್ಲೆಯ ಕೆಜಿಎಫ್ನ ಮೇರಿ ಉಷಾ ಎಂಬುವರು ಸಲ್ಲಿಸಿದ್ದ ಹೆಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ತಾರಾ ವಿತಸ್ತ ಗಂಜು ಅವರಿದ್ದ ಪೀಠ ಈ ಆದೇಶ ನೀಡಿದೆ. ಬಂಧಿತರು 2006ರ ಅಕ್ಟೋಬರ್ 8 ರಂದು ಜನಿಸಿದ್ದು, ಪ್ರಸ್ತುತ 19 ವರ್ಷ ವಯಸ್ಸಿನವರಾಗಿದ್ದಾರೆ. ಅವರ ವಿರುದ್ಧ 2025ರ ಡಿಸೆಂಬರ್ 11ರಂದು ಗೂಂಡಾ ಕಾಯಿದೆಯಡಿ ಬಂಧನ ಆದೇಶ ಹೊರಡಿಸಲಾಗಿದೆ. ಅವರ ವಿರುದ್ಧದ ಆರೋಪಗಳು 2023, 24,25ರಲ್ಲಿ ನಡೆದಿರುವ ಘಟನೆಗಳಾಗಿವೆ. ಹೀಗಾಗಿ ಅವರನ್ನು ಬಂಧನಕ್ಕೆ ಆದೇಶ ಹೊರಡಿಸಿರುವುದು 18 ವರ್ಷಕ್ಕೂ ಕಡಿಮೆ ವಯಸ್ಸಿನಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ.
ಆದ್ದರಿಂದ ಬಾಲನ್ಯಾಯ ಕಾಯಿದೆಯನ್ನು ಸಂವಿಧಾನದ ಪರಿಚ್ಚೇದ 15(3) ಅಡಿ ಜಾರಿ ಮಾಡಲಾಗಿದೆ. ಈ ಕಾಯಿದೆಯು ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಮತ್ತು ಹೇಗ್ ಸಮ್ಮೇಳನದಲ್ಲಿ ಆಗಿರುವ ಒಡಂಬಡಿಕೆಗಳ ಅನುಸಾರದಲ್ಲಿ ಜಾರಿ ಮಾಡಲಾಗಿದೆ. ಹೀಗಾಗಿ ಕಾಯಿದೆಯ ಸೆಕ್ಷನ್ 24 ರ ಉದ್ದೇಶವು, ಅಪ್ರಾಪ್ತನಾಗಿದ್ದ ಸಂದರ್ಭದಲ್ಲಿ ಮಾಡಿದ ಅಪರಾಧ ಕೃತ್ಯಗಳು, ಅವರ ಪ್ರಾಪ್ತರಾದ ಸಂದರ್ಭದಲ್ಲಿ ಅನ್ವಯವಾಗುವುದಿಲ್ಲ ಎಂಬುದಾಗಿ ಹೇಳಲಾಗಿದೆ.
ಆದ್ದರಿಂದ ಬಂಧಿತನ ವಿರುದ್ಧದ ಪ್ರಕರಣಗಳು ಅಪ್ರಾಪ್ತನಾಗಿದ್ದಾಗಿನವಾಗಿದ್ದು. ಆ ಪ್ರಕರಣಗಳ ಆಧಾರದಲ್ಲಿ ಗೂಂಡಾ ಕಾಯಿದೆಯಡಿ ಬಂಧನ ಆದೇಶ ಹೊರಡಿಸಲಾಗುವುದಿಲ್ಲ. ಬಂಧನದ ನಿರ್ಧಾರ ತೆಗೆದುಕೊಳ್ಳುವಾಗ ಅಧಿಕಾರಿಗಳು ಹಳೆಯ ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡಿರುವುದು ಕಾಯ್ದೆಯ ಉದ್ದೇಶಕ್ಕೆ ವಿರುದ್ಧವಾಗಿದೆ. ಹೀಗಾಗಿ ಬಂಧನ ಆದೇಶ ರದ್ದುಪಡಿಸಿ ತಕ್ಷಣ ಬಿಡುಗಡೆ ಮಾಡಬೇಕು ಎಂದು ಆದೇಶಿಸುತ್ತಿರುವುದಾಗಿ ನ್ಯಾಯಪೀಠ ತನ್ನ ಅದೇಶದಲ್ಲಿ ತಿಳಿಸಿದೆ.








