ಮಾಸ್ಕೋ: ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇರಾನ್ ಪರವಾಗಿ ದನಿ ಎತ್ತಿದ್ದಾರೆ. ಇರಾನ್ ದೇಶವು ಅಣ್ವಸ್ತ್ರಗಳನ್ನು ತಯಾರಿಸಲು ಪ್ರಯತ್ನಿಸುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿರುವ ಪುಟಿನ್, ಇರಾನ್‌ನ ಯುರೇನಿಯಂ ಅನ್ನು ಸಂಸ್ಕರಣೆಗಾಗಿ ಮತ್ತೆ ರಷ್ಯಾಕ್ಕೆ ಪಡೆದುಕೊಳ್ಳುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.
“ಟೆಹ್ರಾನ್ (ಇರಾನ್ ರಾಜಧಾನಿ) ಅಣ್ವಸ್ತ್ರಗಳನ್ನು ಹೊಂದುವ ಹಂಬಲ ಹೊಂದಿದೆ ಅಥವಾ ಅದಕ್ಕಾಗಿ ತಯಾರಿ ನಡೆಸುತ್ತಿದೆ ಎಂದು ಹೇಳಲು ಯಾವುದೇ ಸಾಕ್ಷ್ಯಗಳಿಲ್ಲ” ಎಂದು ಪುಟಿನ್ ಸ್ಪಷ್ಟಪಡಿಸಿದ್ದಾರೆ.
ಅಂತರಾಷ್ಟ್ರೀಯ ಆತಂಕಗಳನ್ನು ದೂರ ಮಾಡುವ ನಿಟ್ಟಿನಲ್ಲಿ, ಇರಾನ್ ಉತ್ಪಾದಿಸುವ ಯುರೇನಿಯಂ ಅನ್ನು ರಷ್ಯಾಕ್ಕೆ ಹಸ್ತಾಂತರಿಸುವ ಮತ್ತು ಅಗತ್ಯವಿದ್ದಲ್ಲಿ ಅದನ್ನು ಶಾಂತಿಯುತ ಉದ್ದೇಶಗಳಿಗಾಗಿ ಸಂಸ್ಕರಿಸಿಕೊಡುವ ಹಳೆಯ ಒಪ್ಪಂದವನ್ನು ಪುನಃ ಸಕ್ರಿಯಗೊಳಿಸಲು ಪುಟಿನ್ ಸಮ್ಮತಿಸಿದ್ದಾರೆ.
ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳು ಇರಾನ್ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ಟೀಕಿಸಿರುವ ರಷ್ಯಾ, ಇರಾನ್‌ನೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಸೂಚನೆ ನೀಡಿದೆ.








