ವಾಷಿಂಗ್ಟನ್: ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿರುವ ಮತ್ತು ಅಲ್ಲಿಗೆ ಹೋಗುವ ಕನಸು ಕಾಣುತ್ತಿರುವ ಭಾರತೀಯ ವೃತ್ತಿಪರರಿಗೆ ಅಮೆರಿಕ ಸರ್ಕಾರವು ಬಾರೀ ಶಾಕ್ ನೀಡಿದೆ. H-1B ವೀಸಾ ಹೊಂದಿರುವ ವಿದೇಶಿ ಉದ್ಯೋಗಿಗಳಿಗೆ ನೀಡಬೇಕಾದ ಕನಿಷ್ಠ ವೇತನದ ಮಿತಿಯನ್ನು (Wage Floor) ಶೇಕಡಾ 30 ರಷ್ಟು ಹೆಚ್ಚಿಸಲು ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯೂರಿಟಿ ಇಲಾಖೆಯು ನಿರ್ಧರಿಸಿದೆ.
ಹೊಸ ನಿಯಮದ ಪ್ರಕಾರ, ಕಂಪನಿಗಳು H-1B ವೀಸಾ ಅಡಿಯಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಕಾದರೆ ಈಗ ನೀಡುತ್ತಿರುವ ವೇತನಕ್ಕಿಂತ 30% ಹೆಚ್ಚು ಹಣ ನೀಡಬೇಕಾಗುತ್ತದೆ. ಇದು ಅಮೆರಿಕದ ಕಂಪನಿಗಳಿಗೆ ಆರ್ಥಿಕವಾಗಿ ಬಾರೀ ಹೊರೆಯಾಗಲಿದೆ.
ಅಮೆರಿಕ ನೀಡುವ ಒಟ್ಟು H-1B ವೀಸಾಗಳಲ್ಲಿ ಸುಮಾರು 70% ರಷ್ಟು ಭಾರತೀಯರೇ ಪಡೆಯುತ್ತಿದ್ದಾರೆ. ವೇತನ ಹೆಚ್ಚಳದಿಂದಾಗಿ ಅಮೆರಿಕದ ಕಂಪನಿಗಳು ಭಾರತೀಯ ಮೂಲದ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಹಿಂದೇಟು ಹಾಕುವ ಸಾಧ್ಯತೆ ಇದೆ.
ವೇತನ ಹೆಚ್ಚಳದ ಕಾರಣದಿಂದ ವೆಚ್ಚ ತಗ್ಗಿಸಲು ಕಂಪನಿಗಳು ಹಾಲಿ ಇರುವ ಉದ್ಯೋಗಿಗಳನ್ನು ವಜಾಗೊಳಿಸುವ ಅಥವಾ ಹೊಸ ನೇಮಕಾತಿಯನ್ನು ಸ್ಥಗಿತಗೊಳಿಸುವ ಆತಂಕ ಎದುರಾಗಿದೆ.








