ವಾಷಿಂಗ್ಟನ್: ಪಶ್ಚಿಮ ಏಷ್ಯಾದ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲ್ಲಿಸಿರುವ ಮಹತ್ವದ ಶಾಂತಿ ಪ್ರಸ್ತಾವನೆಯನ್ನು ಇರಾನ್ ಸರ್ಕಾರವು ತನ್ನದೇ ಆದ ವೇಗದಲ್ಲಿ ಪರಿಶೀಲಿಸುತ್ತಿದೆ. ಅಮೆರಿಕದ ಗಡುವುಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಇರಾನ್‌ನಿಂದ ಶುಕ್ರವಾರದ ವೇಳೆಗೆ ಉತ್ತರ ಸಿಗಬಹುದು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ನಿರೀಕ್ಷಿಸಿದ್ದರು. ಆದರೆ, “ಅಮೆರಿಕದ ರಾಜಕಾರಣಿಗಳು ನಿಗದಿಪಡಿಸುವ ಗಡುವುಗಳು ನಮಗೆ ಏನೂ ಅಲ್ಲ, ನಾವು ನಮ್ಮದೇ ರೀತಿಯಲ್ಲಿ ಕೆಲಸ ಮಾಡುತ್ತೇವೆ” ಎಂದು ಇರಾನ್ ವಿದೇಶಾಂಗ ವಕ್ತಾರ ಇಸ್ಮಾಯಿಲ್ ಬಘೈ ಹೇಳಿದ್ದಾರೆ.
ಅಮೆರಿಕದ ಪ್ರಸ್ತಾವನೆಯು ಅತ್ಯಂತ ತಾಂತ್ರಿಕ ಅಂಶಗಳಿಂದ ಕೂಡಿದ್ದು, ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿ, ಸಂಸತ್ ಮತ್ತು ಅಂತಿಮವಾಗಿ ಸುಪ್ರೀಂ ಲೀಡರ್ ಅಲಿ ಖಮೇನಿ ಅವರ ಅನುಮೋದನೆಯ ಅಗತ್ಯವಿರುವುದರಿಂದ ಪ್ರತಿಕ್ರಿಯೆ ನೀಡಲು ವಿಳಂಬವಾಗುತ್ತಿದೆ ಎನ್ನಲಾಗಿದೆ.
ವಾಷಿಂಗ್ಟನ್‌ನ ಪ್ರಸ್ತಾವನೆಯಲ್ಲಿ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಬಾರದು ಎಂಬ ಪ್ರಮುಖ ಅಂಶವಿದೆ. ಈ ಬಗ್ಗೆ ಟ್ರಂಪ್ ಪ್ರತಿಕ್ರಿಯಿಸಿ, “ಅವರು ಒಪ್ಪಿಕೊಳ್ಳುವ ಸಾಧ್ಯತೆಯಿದೆ, ಆದರೆ ಅವರ ವ್ಯವಸ್ಥೆ ಸ್ವಲ್ಪ ಅಸ್ತವ್ಯಸ್ತವಾಗಿರುವುದರಿಂದ ಸಮಯ ತೆಗೆದುಕೊಳ್ಳುತ್ತಿರಬಹುದು” ಎಂದು ಹೇಳಿದ್ದಾರೆ.








