ಕಳೆದ ವರ್ಷ ಅಹಮದಾಬಾದ್‌ನಲ್ಲಿ ನಡೆದ ಭೀಕರ ಏರ್ ಇಂಡಿಯಾ AI-171 ವಿಮಾನ ಅಪಘಾತದ ತನಿಖೆಯು ಈಗ ಅಂತಿಮ ಹಂತಕ್ಕೆ ತಲುಪಿದ್ದು, ಮುಂದಿನ ಒಂದು ತಿಂಗಳೊಳಗೆ ಸಂಪೂರ್ಣ ತನಿಖಾ ವರದಿ ಸಾರ್ವಜನಿಕವಾಗುವ ಸಾಧ್ಯತೆಯಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ತಿಳಿಸಿದ್ದಾರೆ.
ಗಾಂಧಿನಗರದ ಗಿಫ್ಟ್ ಸಿಟಿಯಲ್ಲಿ (GIFT City) ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವರು, ಈ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ವಿಮಾನ ಅಪಘಾತ ತನಿಖಾ ಸಂಸ್ಥೆಯು (AAIB) ಈಗಾಗಲೇ ಬಹುತೇಕ ತನಿಖೆಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ಅಂತಿಮ ವರದಿಯನ್ನು ಸಿದ್ಧಪಡಿಸುತ್ತಿದೆ.ಈ ವಿಮಾನದಲ್ಲಿ ವಿದೇಶಿ ಪ್ರಜೆಗಳೂ ಪ್ರಯಾಣಿಸುತ್ತಿದ್ದ ಕಾರಣ, ತನಿಖೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಅಂತರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಡೆಸಲಾಗುತ್ತಿದೆ. ಈ ವರದಿಯನ್ನು ಜಾಗತಿಕ ಮಟ್ಟದಲ್ಲಿ ಯಾವುದೇ ಸಂಸ್ಥೆ ಪ್ರಶ್ನಿಸಬಹುದಾದ್ದರಿಂದ, ಪ್ರತಿಯೊಂದು ಅಂಶವನ್ನೂ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ.
ಕೇಂದ್ರ ಸರ್ಕಾರವು AAIB ಗೆ ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಒದಗಿಸಿದೆ. ಆದರೆ, ತನಿಖೆಯಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.








