ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆ-ಕಾಲೇಜುಗಳ ವಸತಿ ನಿಲಯಗಳು ಕಡ್ಡಾಯವಾಗಿ ಹೊಸ ನಿಯಮಾವಳಿಗಳಡಿ ನೋಂದಾಯಿಸಿಕೊಳ್ಳಬೇಕು ಮತ್ತು ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ನ ನಜೀರ್ಸಾಬ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2 ತಿಂಗಳ ಅವಧಿಯೊಳಗೆ ಎಲ್ಲಾ ವಸತಿ ನಿಲಯಗಳು ‘ಕರ್ನಾಟಕ ಮಕ್ಕಳ ವಸತಿ ನಿಲಯಗಳ ನಿಯಂತ್ರಣ ನಿಯಮಗಳು-2025’ ರ ಅಡಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು. ತಪ್ಪಿದಲ್ಲಿ ಅಂತಹ ಸಂಸ್ಥೆಗಳ ಮಾನ್ಯತೆಯನ್ನು ರದ್ದುಪಡಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ ಪನ್ನೇಕರ್ ಅವರು ಮಾತನಾಡಿ, ಪ್ರತಿ ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಸುರಕ್ಷತಾ ಸಮಿತಿ, ಮೇಲ್ವಿಚಾರಣಾ ಸಮಿತಿ ಮತ್ತು ರ್ಯಾಗಿಂಗ್ ತಡೆ ಸಮಿತಿಗಳನ್ನು ರಚಿಸಿ ಪ್ರತಿ ತಿಂಗಳು ಸಭೆ ನಡೆಸಬೇಕು ಎಂದು ಹೇಳಿದರು.
ಆಡಳಿತ ಮಂಡಳಿಗಳಲ್ಲಿ ಕನಿಷ್ಠ ಒಬ್ಬ ಮಹಿಳಾ ಸದಸ್ಯರಿರಬೇಕು. ಬಾಲಕಿಯರ ನಿಲಯಗಳಿಗೆ ಮಹಿಳಾ ವಾರ್ಡನ್ ಮತ್ತು ಬಾಲಕರ ನಿಲಯಗಳಿಗೆ ಪುರುಷ ವಾರ್ಡನ್ ನೇಮಿಸುವುದು ಕಡ್ಡಾಯ. ಮಕ್ಕಳು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗದಂತೆ ತಡೆಯಲು ಪ್ರತಿ 15 ದಿನಗಳಿಗೊಮ್ಮೆ ವಿದ್ಯಾರ್ಥಿಗಳ ಬ್ಯಾಗ್ಗಳನ್ನು ತಪಾಸಣೆ ಮಾಡಬೇಕು. ಅಲ್ಲದೆ, 1098 ಮತ್ತು 112 ಸಹಾಯವಾಣಿ ಸಂಖ್ಯೆಗಳನ್ನು ಗೋಡೆಗಳ ಮೇಲೆ ಕಡ್ಡಾಯವಾಗಿ ಬರೆಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ಮಾತನಾಡಿ, ವಸತಿ ನಿಲಯಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕಾರ್ಯನಿರ್ವಹಣೆಯನ್ನು ಖಾತ್ರಿಪಡಿಸಿಕೊಳ್ಳಲು ಸೂಚಿಸಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ತ್ರಿವೇಣಿ ಪತ್ತಾರ್ ಅವರು ಮಾತನಾಡಿ, ಮಕ್ಕಳ ರಕ್ಷಣಾ ನೀತಿ-2015 ರ ಅನುಷ್ಠಾನದ ಪರಿಷ್ಕೃತ ಮಕ್ಕಳ ರಕ್ಷಣಾ ನೀತಿಯಡಿ ಸಿಬ್ಬಂದಿಗಳ ಕಡ್ಡಾಯ ಪೊಲೀಸ್ ಪರಿಶೀಲನೆ, ದೂರು ಪೆಟ್ಟಿಗೆಗಳ ಅಳವಡಿಕೆ ಮತ್ತು ನಿಗದಿತ ಊಟದ ಮೆನು ಪಾಲನೆ, ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ತಜ್ಞರಿಂದ ನಿರಂತರ ತಪಾಸಣೆ ಕೈಗೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರದೇವಿ, ಡಿಡಿಪಿಐ ಉಮಾದೇವಿ ಹಾಗೂ ಜಿಲ್ಲೆಯ ವಿವಿಧ ವಸತಿ ನಿಲಯಗಳ 170ಕ್ಕೂ ಹೆಚ್ಚು ಮುಖ್ಯಸ್ಥರು ಮತ್ತು ನಿಲಯಪಾಲಕರು ಉಪಸ್ಥಿತರಿದ್ದರು.








