ವಾಷಿಂಗ್ಟನ್: ಬ್ರಹ್ಮಾಂಡದಲ್ಲಿ ಭೂಮಿಯನ್ನು ಹೊರತುಪಡಿಸಿ ಅನ್ಯಗ್ರಹ ಜೀವಿಗಳಿವೆಯೇ? ದಶಕಗಳಿಂದ ಮಾನವನನ್ನು ಕಾಡುತ್ತಿರುವ ಈ ಪ್ರಶ್ನೆಗೆ ಪೂರಕವೆಂಬಂತೆ ಅಮೆರಿಕದ ರಕ್ಷಣಾ ಇಲಾಖೆ (ಪೆಂಟಗನ್) ಮಹತ್ವದ ಹೆಜ್ಜೆಯನ್ನಿಟ್ಟಿದೆ. ಅಧ್ಯಕ್ಷರ ನಿರ್ದೇಶನದ ಮೇರೆಗೆ ಪೆಂಟಗನ್ ಸುಮಾರು 162 ನಿಗೂಢ ಕಡತಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದು, ಇದರಲ್ಲಿ ಚಂದಿರನ ಅಪ್ಪೋಲೋ ಮಿಷನ್ ಫೋಟೋಗಳು ಸೇರಿದಂತೆ ಹಲವು ಬೆಚ್ಚಿಬೀಳಿಸುವ ಮಾಹಿತಿ ಉಲ್ಲೇಖವಾಗಿದೆ.
ಅಪ್ಪೋಲೋ ಫೋಟೋಗಳಲ್ಲಿ ಕಂಡ ಆ ‘ಮೂರು ಚುಕ್ಕೆ’ಗಳು ಯಾವುವು?
ಬಿಡುಗಡೆಯಾದ ದಾಖಲೆಗಳಲ್ಲಿ ಎಲ್ಲರ ಗಮನ ಸೆಳೆದಿರುವುದು 1972ರ ಅಪ್ಪೋಲೋ 17 ರ ಬಾಹ್ಯಾಕಾಶ ಯಾನದ ಫೋಟೋಗಳು. ಚಂದಿರನ ಮೇಲ್ಮೈನಲ್ಲಿ ತೆಗೆದ ಈ ಫೋಟೋಗಳಲ್ಲಿ ಆಕಾಶದಲ್ಲಿ ತ್ರಿಕೋನ ಮಾದರಿಯ ಮೂರು ಪ್ರಕಾಶಮಾನವಾದ ಚುಕ್ಕೆಗಳು ಕಂಡುಬಂದಿವೆ. ಈ ಹಿಂದೆ ಇವು ಕ್ಯಾಮೆರಾದ ತಾಂತ್ರಿಕ ದೋಷ ಅಥವಾ ಬೆಳಕಿನ ಪ್ರತಿಫಲನ ಎಂದು ಭಾವಿಸಲಾಗಿತ್ತು. ಆದರೆ ಪೆಂಟಗನ್ನ ಇತ್ತೀಚಿನ ವಿಶ್ಲೇಷಣೆಯು, ಅದು ನಿಜವಾಗಿಯೂ ಯಾವುದೋ ಒಂದು “ಭೌತಿಕ ವಸ್ತು” (Physical Object) ಆಗಿರಬಹುದು ಎಂದು ಅಂದಾಜಿಸಿದೆ.
ಅಷ್ಟೇ ಅಲ್ಲದೆ, 1969ರ ಅಪ್ಪೋಲೋ 12 ಮತ್ತು ಜೆಮಿನಿ 7 ಮಿಷನ್ಗಳ ಸಂದರ್ಭದಲ್ಲೂ ಗಗನಯಾತ್ರಿಗಳು ನಿಗೂಢ ವಸ್ತುಗಳನ್ನು ಕಂಡಿರುವುದಾಗಿ ಆಡಿಯೋ ಮತ್ತು ಲಿಖಿತ ದಾಖಲೆಗಳು ತಿಳಿಸಿವೆ.
ವರದಿಯ ಪ್ರಮುಖ ಅಂಶಗಳು:
ವೈಮಾನಿಕ ವಿಚಿತ್ರಗಳು: ವರದಿಯಲ್ಲಿ ಸುಮಾರು 28 ವಿಡಿಯೋಗಳು ಮತ್ತು 120ಕ್ಕೂ ಹೆಚ್ಚು PDF ದಾಖಲೆಗಳಿವೆ. ಇದರಲ್ಲಿ ವಿಮಾನಗಳ ಸುತ್ತ ನಿಗೂಢ ವಸ್ತುಗಳು 90 ಡಿಗ್ರಿ ಕೋನದಲ್ಲಿ ಅತಿ ವೇಗವಾಗಿ ಚಲಿಸುವುದು ಸೆರೆಯಾಗಿದೆ.
ಜಗತ್ತಿನಾದ್ಯಂತ ಸೈಟಿಂಗ್ಸ್: ಕೇವಲ ಅಮೆರಿಕ ಮಾತ್ರವಲ್ಲದೆ ಗ್ರೀಸ್, ಕಝಾಕಿಸ್ತಾನ್ ಮತ್ತು ಜಪಾನ್ ಸೇರಿದಂತೆ ಜಗತ್ತಿನ ವಿವಿಧ ಭಾಗಗಳಲ್ಲಿ ಕಂಡ UAP ಗಳ ವರದಿಗಳು ಇದರಲ್ಲಿವೆ.
ಸೌರಾನ್ ಕಣ್ಣಿನಂತಿದ್ದ ಗೋಳ: 2023ರಲ್ಲಿ ಫೆಡರಲ್ ಉದ್ಯೋಗಿಯೊಬ್ಬರು ‘ಲಾರ್ಡ್ ಆಫ್ ದಿ ರಿಂಗ್ಸ್’ ಸಿನೆಮಾದ ‘ಸೌರಾನ್ ಕಣ್ಣಿನ’ (Eye of Sauron) ಮಾದರಿಯಲ್ಲಿದ್ದ ಪ್ರಕಾಶಮಾನವಾದ ಗೋಳವನ್ನು ಕಂಡಿರುವುದಾಗಿ ವರದಿ ಮಾಡಿದ್ದಾರೆ.








