ತೆಹ್ರಾನ್: ಮಧ್ಯಪ್ರಾಚ್ಯದ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz) ಅಮೆರಿಕ ಮತ್ತು ಇರಾನ್ ಪಡೆಗಳ ನಡುವೆ ಭೀಕರ ಸಂಘರ್ಷ ನಡೆದಿದೆ. ಉಭಯ ದೇಶಗಳು ಪರಸ್ಪರ ಕದನ ವಿರಾಮ ಉಲ್ಲಂಘನೆ ಮತ್ತು ವಾಯುದಾಳಿ ನಡೆಸಿದ ಆರೋಪಗಳನ್ನು ಮಾಡಿಕೊಂಡಿದ್ದು, ಈ ಭಾಗದಲ್ಲಿ ಯುದ್ಧದ ಭೀತಿ ಎದುರಾಗಿದೆ. ಇದರ ಬೆನ್ನಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ಗೆ “ಕೂಡಲೇ ಒಪ್ಪಂದಕ್ಕೆ ಸಹಿ ಹಾಕಿ” ಎಂದು ಅಂತಿಮ ಎಚ್ಚರಿಕೆ ನೀಡಿದ್ದಾರೆ.
ಹೊರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಮಿಲಿಟರಿ ನೆಲೆಗಳು ಮತ್ತು ಹಡಗುಗಳನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದೆ ಎಂದು ಅಮೆರಿಕ ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಕೂಡ ಇರಾನ್ನ ಪ್ರಮುಖ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಮಿತಿಮೀರಿದೆ.
ಇರಾನ್ ತನ್ನ ಸಾರ್ವಭೌಮತ್ವವನ್ನು ಅಮೆರಿಕ ಉಲ್ಲಂಘಿಸಿದೆ ಎಂದು ವಾದಿಸಿದರೆ, ಅಮೆರಿಕವು ಇರಾನ್ ಕದನ ವಿರಾಮದ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಕಿಡಿಕಾರಿದೆ.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಅಧ್ಯಕ್ಷ ಟ್ರಂಪ್, “ಇರಾನ್ ಈ ಕೂಡಲೇ ಮಾತುಕತೆಗೆ ಬಂದು ಒಪ್ಪಂದಕ್ಕೆ ಸಹಿ ಹಾಕಬೇಕು. ತಡವಾದಷ್ಟೂ ಇರಾನ್ಗೆ ಭಾರಿ ನಷ್ಟ ಕಾದಿದೆ” ಎಂದು ಎಚ್ಚರಿಸಿದ್ದಾರೆ. ಪರಿಸ್ಥಿತಿ ಕೈಮೀರುವ ಮೊದಲೇ ಶರಣಾಗುವಂತೆ ಟೆಹ್ರಾನ್ಗೆ ಟ್ರಂಪ್ ಸಂದೇಶ ರವಾನಿಸಿದ್ದಾರೆ.
ಹೊರ್ಮುಜ್ ಜಲಸಂಧಿಯು ವಿಶ್ವದ ಶೇ. 20 ರಷ್ಟು ತೈಲ ಸರಬರಾಜು ಮಾಡುವ ಮಾರ್ಗವಾಗಿದ್ದು, ಇಲ್ಲಿನ ಸಂಘರ್ಷದಿಂದಾಗಿ ಜಾಗತಿಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗುವ ಭೀತಿ ಎದುರಾಗಿದೆ.








