ಕಾರವಾರ : ಕಾರವಾರದಲ್ಲಿ ಘೋರ ಘಟನೆ ನಡೆದಿದ್ದು, ಕಾರವಾರದ ಪ್ರಸಿದ್ಧ ಪ್ರವಾಸಿ ತಾಣವಾದ ಮುಂಡಳ್ಳಿ ನಸ್ತಾರ್ ಬೀಚ್ನಲ್ಲಿ ಬುಧವಾರ ಸಂಜೆ ಅರಬ್ಬಿ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ.ಮೃತಪಟ್ಟವರನ್ನು ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಅಫ್ರೋಜ್ (34) ಮತ್ತು ರಿಜ್ವಾನ್ ಅಹ್ಮದ್ ಸಾಕೀರ್ (27) ಎಂದು ಗುರುತಿಸಲಾಗಿದೆ. ಇವರು ಸ್ಥಳೀಯ ಗಾರ್ಮೆಂಟ್ಸ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ನಿನ್ನೆ ಸಂಜೆ ಸುಮಾರು 4 ಗಂಟೆಯ ಸುಮಾರಿಗೆ ಏಳು ಜನರ ತಂಡವೊಂದು ವಾಯುವಿಹಾರಕ್ಕಾಗಿ ನಸ್ತಾರ್ ಬೀಚ್ಗೆ ತೆರಳಿತ್ತು. ಈ ಪೈಕಿ ಮೂವರು ಸಮುದ್ರ ತೀರದಲ್ಲಿ ಕುಳಿತುಕೊಂಡಿದ್ದರೆ, ಉಳಿದ ನಾಲ್ವರು ಸಮೀಪದ ಬಂಡೆಯ ಮೇಲೆ ನಿಂತು ಸಮುದ್ರದ ಸೌಂದರ್ಯ ವೀಕ್ಷಿಸುತ್ತಿದ್ದರು. ಈ ವೇಳೆ ಏಕಾಏಕಿ ಅಪ್ಪಳಿಸಿದ ಬೃಹತ್ ಅಲೆಯೊಂದು ಬಂಡೆಯ ಮೇಲಿದ್ದ ಇಬ್ಬರನ್ನು ಸಮುದ್ರಕ್ಕೆ ಎಳೆದುಕೊಂಡು ಹೋಗಿದೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದರು. ಸಾಮಾಜಿಕ ಕಾರ್ಯಕರ್ತ ಸೌದ್ ಗವಾಹಿ ಅವರು ಸಿಹಾನ್ ಹಾಗೂ ಸಾಜಪ್ ಎಂಬವರ ಜೊತೆಗೂಡಿ ಪ್ರಾಣದ ಹಂಗು ತೊರೆದು ಸಮುದ್ರಕ್ಕಿಳಿದು ರಕ್ಷಣೆಗೆ ಮುಂದಾದರು. ಆದರೆ, ದುರಾದೃಷ್ಟವಶಾತ್ ಅಷ್ಟರಲ್ಲಾಗಲೇ ಇಬ್ಬರೂ ಯುವಕರು ಮೃತಪಟ್ಟಿದ್ದರು. ನಂತರ ಅವರ ಮೃತದೇಹಗಳನ್ನು ಸಮುದ್ರದಿಂದ ಹೊರತೆಗೆಯಲಾಯಿತು.








