ಚೆನ್ನೈ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ತಮಿಳುನಾಡು ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊಮ್ಮಿರುವ ಟಿವಿಕೆ ಸರ್ಕಾರ ರಚಿಸಲು ಅಗತ್ಯ ಸಂಖ್ಯಾಬಲ ಹೊಂದಿದೆ ಎಂಬುದನ್ನ ಮನವರಿಕೆ ಮಾಡಲು ನಟ ವಿಜಯ್ ಹೆಣಗಾಡುತ್ತಿದ್ದಾರೆ. ಇಂದು ಬೆಳಗ್ಗೆ ರಾಜ್ಯಪಾಲ ಆರ್. ವಿ ಅರ್ಲೇಕರ್ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಲೋಕಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ವಿಜಯ್, ತಮಗೆ ಮೊದಲು ಪದಗ್ರಹಣಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ತಾವು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ, ಸದನದಲ್ಲಿ ನಿಗದಿತ ಅವಧಿಯೊಳಗೆ ಬಹುಮತ ಸಾಬೀತುಪಡಿಸುವುದಾಗಿ ಭರವಸೆ ನೀಡಿದರು. ಚುನಾವಣೆಯಲ್ಲಿ ಅತಿದೊಡ್ಡ ಪಕ್ಷದ ನಾಯಕನಾಗಿ ತಮಗೆ ಸರ್ಕಾರ ರಚಿಸಲು ಮೊದಲ ಆದ್ಯತೆ ನೀಡಬೇಕು ಎಂಬುದು ಅವರ ಪ್ರಮುಖ ವಾದವಾಗಿತ್ತು.
ಆದರೆ, ವಿಜಯ್ ಅವರ ಈ ವಾದಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗಿದೆ. ಕೇವಲ ಅತಿದೊಡ್ಡ ಪಕ್ಷ ಎಂಬ ಕಾರಣಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ, ಬದಲಿಗೆ ಸ್ಪಷ್ಟ ಬಹುಮತಕ್ಕೆ ಅಗತ್ಯವಿರುವ ಸಂಖ್ಯಾಬಲದ ಬೆಂಬಲವನ್ನು ಮೊದಲೇ ತೋರಿಸಬೇಕು ಎಂದು ರಾಜ್ಯಪಾಲರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ತಾಂತ್ರಿಕ ಕಾರಣಗಳನ್ನು ನೀಡಿ ರಾಜ್ಯಪಾಲರು ವಿಜಯ್ ಅವರ ಮನವಿಯನ್ನು ಪುರಸ್ಕರಿಸಿಲ್ಲ.
ರಾಜ್ಯಪಾಲರು ವಿಜಯ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, “ಕನಿಷ್ಠ 118 ಶಾಸಕರ ಸಹಿ ಇರುವ ಬೆಂಬಲ ಪತ್ರದೊಂದಿಗೆ ಬನ್ನಿ” ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಸಂಖ್ಯಾಬಲದ ಸ್ಪಷ್ಟ ದಾಖಲೆ ಇಲ್ಲದೆ ಯಾವುದೇ ಮುಂದಿನ ಕ್ರಮ ಕೈಗೊಳ್ಳಲು ರಾಜ್ಯಪಾಲರು ನಿರಾಕರಿಸಿದ್ದಾರೆ. ಇದರಿಂದಾಗಿ ವಿಜಯ್ ಅವರು ಸತತ ಎರಡನೇ ದಿನವೂ ನಿರಾಸೆಯಿಂದ ವಾಪಸ್ ಆಗುವಂತಾಗಿದೆ.
ಸದ್ಯ ತಮಿಳುನಾಡು ರಾಜಕೀಯ ಹಗ್ಗಜಗ್ಗಾಟದ ಕೇಂದ್ರಬಿಂದುವಾಗಿದ್ದು, ವಿಜಯ್ ಅವರು 118 ಶಾಸಕರ ಬೆಂಬಲವನ್ನು ಹೇಗೆ ಕ್ರೋಢೀಕರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಮತ್ತೊಂದೆಡೆ, ರಾಜ್ಯಪಾಲರ ಈ ನಿರ್ಧಾರದಿಂದ ಟಿವಿಕೆ ಕಾರ್ಯಕರ್ತರಲ್ಲಿ ಆತಂಕ ಮನೆಮಾಡಿದ್ದರೆ, ರಾಜಕೀಯ ವಲಯದಲ್ಲಿ ಮುಂದಿನ ನಡೆಯ ಬಗ್ಗೆ ತೀವ್ರ ಚರ್ಚೆಗಳು ಆರಂಭವಾಗಿವೆ.







