ಸೋಷಿಯಲ್ ಮೀಡಿಯಾದಲ್ಲಿ ಬರುವ ಪ್ರತಿಯೊಂದು ವಿಷಯವನ್ನೂ ನಿಜವೆಂದು ನಂಬಿ ಪಾಲಿಸಿದರೆ ಪ್ರಾಣಕ್ಕೇ ಕಪತ್ತು ಎಂಬುವುದಕ್ಕೆ ಈ ಘಟನೆಯೇ ಸಾಕ್ಷಿ. ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಎರ್ಲಂಪಾಲೆಂ ಗ್ರಾಮದಲ್ಲಿ ಈ ಬೇಸರದ ಘಟನೆ ನಡೆದಿದೆ.
ಏನಿದು ಘಟನೆ?
ಸ್ಥಳೀಯರು ನೀಡಿದ ಮಾಹಿತಿಯಂತೆ, ಒಂದೇ ಕುಟುಂಬದ ನಾಲ್ವರು ಸದಸ್ಯರು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಅಡುಗೆ ವಿಡಿಯೋ ನೋಡಿದ್ದಾರೆ. ಅದರಲ್ಲಿ ಉಮ್ಮತ್ತಿ ಹೂವನ್ನು (Datura Flower) ಬೇಳೆ ಸಾರಿನಲ್ಲಿ ಹಾಕಿಕೊಂಡು ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತೋರಿಸಲಾಗಿತ್ತು. ಅದನ್ನು ನಿಜವೆಂದು ನಂಬಿದ ಕುಟುಂಬಸ್ಥರು, ತಮ್ಮ ಮನೆಯ ಅಂಗಳದಲ್ಲಿದ್ದ ಉಮ್ಮತ್ತಿ ಹೂಗಳನ್ನು ಕುಯ್ದು, ಬೇಳೆ ಸಾರಿಗೆ ಹಾಕಿ ಅಡುಗೆ ಮಾಡಿ ತಿಂದಿದ್ದಾರೆ.
ಅಡುಗೆ ತಿಂದ ಕೆಲವೇ ಹೊತ್ತಿನಲ್ಲಿ ಕುಟುಂಬದ ಎಲ್ಲರಿಗೂ ತೀವ್ರ ಅಸ್ವಸ್ಥತೆ ಕಾಡಿದೆ. ವಾಂತಿ, ತಲೆತಿರುಗುವಿಕೆ ಉಂಟಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣವೇ ಗಮನಿಸಿದ ಸ್ಥಳೀಯರು ಅವರನ್ನು ಕಾಕಿನಾಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಸ್ವಸ್ಥಗೊಂಡವರನ್ನು ವೀರಲಕ್ಷ್ಮಿ, ಗಂಗಾಭವಾನಿ, ಜಯಲಕ್ಷ್ಮಿ ಮತ್ತು ವೀರಬ್ಬುಲು ಎಂದು ಗುರುತಿಸಲಾಗಿದೆ.
ವೈದ್ಯರ ಎಚ್ಚರಿಕೆ
ವಿಷಕಾರಿಯಾದ ಉಮ್ಮತ್ತಿ ಹೂವನ್ನು ಅಡುಗೆಗೆ ಬಳಸಿದ್ದನ್ನು ಕಂಡು ವೈದ್ಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಉಮ್ಮತ್ತಿ ಹೂವುಗಳು ಅತ್ಯಂತ ವಿಷಕಾರಿ ಎಂದು ಅವರು ತಿಳಿಸಿದ್ದಾರೆ. ಇದಕ್ಕೆ ನಿರ್ದಿಷ್ಟವಾದ ಯಾವುದೇ ಪ್ರತಿವಿಷ (Antidote) ಇಲ್ಲದ ಕಾರಣ, ಕೇವಲ ಸಪೋರ್ಟಿವ್ ಚಿಕಿತ್ಸೆಯ ಮೂಲಕವೇ ವಿಷದ ಪ್ರಭಾವವನ್ನು ಕಡಿಮೆ ಮಾಡಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯಕ್ಕೆ ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಸೋಷಿಯಲ್ ಮೀಡಿಯಾ ಎಚ್ಚರ!
ಈಗಿನ ದಿನಗಳಲ್ಲಿ ಕೇವಲ ವ್ಯೂಸ್ (Views) ಪಡೆಯುವ ಉದ್ದೇಶದಿಂದ ಕೆಲವರು ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ಗಳಲ್ಲಿ ವೈಜ್ಞಾನಿಕ ಆಧಾರವಿಲ್ಲದ ಇಂತಹ ಅಪಾಯಕಾರಿ ಸಲಹೆಗಳನ್ನು ನೀಡುತ್ತಿದ್ದಾರೆ. ಇಂತಹ ಪ್ರಯೋಗಗಳನ್ನು ಮಾಡುವ ಮುನ್ನ ಯೋಚಿಸುವುದು ಅಗತ್ಯ. ಉಮ್ಮತ್ತಿ ಗಿಡದ ಬೀಜ ಮತ್ತು ಹೂವುಗಳು ನಮ್ಮ ನರಮಂಡಲದ ಮೇಲೆ ಕೆಟ್ಟ ಪರಿಣಾಮ ಬೀರಿ ಪ್ರಾಣಕ್ಕೇ ಸಂಚಕಾರ ತರಬಲ್ಲವು ಎಂದು ಅಧಿಕಾರಿಗಳು ಮತ್ತು ವೈದ್ಯರು ಎಚ್ಚರಿಸಿದ್ದಾರೆ.








