ನವದೆಹಲಿ: ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿದ್ದಾರೆ ಎಂದು ದಾಖಲಾಗಿದ್ದ ಪ್ರಕರಣವೊಂದನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಮತ್ತು ನ್ಯಾಯಮೂರ್ತಿ ಮನ್ಮೋಹನ್ ಅವರನ್ನೊಳಗೊಂಡ ಪೀಠವು ಈ ಪ್ರಮುಖ ತೀರ್ಪನ್ನು ನೀಡಿದೆ.
ಪ್ರಕರಣದ ಹಿನ್ನೆಲೆ
ಮಹಾರಾಷ್ಟ್ರದ ಶೈಲೇಶ್ ಭಾಯ್ ಗೋವಿಂದ್ ಭಾಯ್ ಮಕ್ವಾನಾ ಎಂಬುವರ ವಿರುದ್ಧ 2021ರಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ರದ್ದುಗೊಳಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ, ಆರೋಪಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇದು ಇಬ್ಬರು ವ್ಯಕ್ತಿಗಳ ನಡುವೆ ದೀರ್ಘಕಾಲದವರೆಗೆ ನಡೆದ ‘ಪರಸ್ಪರ ಒಪ್ಪಿಗೆಯ ಸಂಬಂಧ’ ಎಂದು ಸ್ಪಷ್ಟಪಡಿಸಿದೆ.
ದೂರುದಾರೆ ಮತ್ತು ಆರೋಪಿ ಇಬ್ಬರಿಗೂ ಮೊದಲೇ ಮದುವೆಯಾಗಿತ್ತು. ತಮ್ಮ ವೈವಾಹಿಕ ಸ್ಥಿತಿಯ ಬಗ್ಗೆ ಇಬ್ಬರಿಗೂ ಸಂಪೂರ್ಣ ಅರಿವಿತ್ತು.ಇಬ್ಬರೂ ಸುಮಾರು ನಾಲ್ಕು ವರ್ಷಗಳ ಕಾಲ ಒಟ್ಟಿಗೆ ಪ್ರಯಾಣಿಸಿದ್ದು, ದೈಹಿಕ ಸಂಬಂಧ ಹೊಂದಿದ್ದರು. 2017ರಲ್ಲಿ ಸಂಬಂಧ ಆರಂಭವಾಗಿದ್ದರೂ, 2021ರವರೆಗೆ ಯಾವುದೇ ದೂರು ದಾಖಲಾಗಿರಲಿಲ್ಲ.ಸಂಬಂಧದಲ್ಲಿ ಬಿರುಕು ಮೂಡಿದ ನಂತರವಷ್ಟೇ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಮದುವೆಯ ಭರವಸೆ ವಿಫಲವಾದ ಪ್ರತಿ ಸಂದರ್ಭವನ್ನು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ. ಕೇವಲ ಮದುವೆಯ ಭರವಸೆಯಿಂದಲೇ ದೈಹಿಕ ಸಂಬಂಧ ಏರ್ಪಟ್ಟಿದೆ ಮತ್ತು ಆ ಭರವಸೆಯು ಮೊದಲಿನಿಂದಲೂ ವಂಚನೆಯ ಉದ್ದೇಶದಿಂದ ಕೂಡಿತ್ತು ಎಂಬುದು ಸಾಬೀತಾದರೆ ಮಾತ್ರ ಅದು ಅತ್ಯಾಚಾರವೆನಿಸಿಕೊಳ್ಳುತ್ತದೆ” ಎಂದು ಕೋರ್ಟ್ ಪುನರುಚ್ಚರಿಸಿದೆ.
ಈ ಪ್ರಕರಣದಲ್ಲಿ ವಂಚನೆ ನಡೆದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಮತ್ತು ಇಬ್ಬರೂ ಇಚ್ಛಾಪೂರ್ವಕವಾಗಿಯೇ ಸಹಬಾಳ್ವೆ ನಡೆಸಿದ್ದಾರೆ ಎಂದು ತಿಳಿಸಿದ ಸುಪ್ರೀಂ ಕೋರ್ಟ್, ತುಳಜಾಪುರ ನ್ಯಾಯಾಲಯದಲ್ಲಿ ಬಾಕಿ ಇರುವ ಚಾರ್ಜ್ ಶೀಟ್ ಸೇರಿದಂತೆ ಎಲ್ಲಾ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಗೊಳಿಸಿದೆ.








