ಕಡಪ: ಹೆಂಡತಿ ಸ್ವಲ್ಪ ತೂಕ ಹೆಚ್ಚಿಸಿಕೊಂಡಳು ಎಂಬ ಸಣ್ಣ ಕಾರಣಕ್ಕೆ, ಎಂಟು ವರ್ಷ ಸಂಸಾರ ಮಾಡಿದ್ದ ಪತಿಯೇ ಅವಳನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ನಡೆದಿದೆ.
ಏನಿದು ಘಟನೆ?
ಆಂಧ್ರದ ಪ್ರೊದ್ದಟೂರಿನ ಕಿರಣ್ ಕುಮಾರ್ ಮತ್ತು ಪದ್ಮಜಾ (31) ಎಂಬುವವರು 2018ರಲ್ಲಿ ಮದುವೆಯಾಗಿದ್ದರು. ಕಿರಣ್ ಮದುವೆಯಾದಾಗಿನಿಂದ ಅತ್ತೆ ಮನೆಯಲ್ಲೇ ವಾಸವಿದ್ದ. ಈ ದಂಪತಿಗೆ ಒಬ್ಬಳು ಮಗಳೂ ಇದ್ದಾಳೆ. ಐದು ವರ್ಷಗಳಿಂದ ಕಿರಣ್ ಮನೆಯಿಂದಲೇ ಕೆಲಸ (WFH) ಮಾಡುತ್ತಿದ್ದ. ಹೊರನೋಟಕ್ಕೆ ಈ ಸಂಸಾರ ಚೆನ್ನಾಗಿಯೇ ಕಾಣಿಸುತ್ತಿದ್ದರೂ, ಕಿರಣ್ ಮನಸ್ಸಿನಲ್ಲಿ ಮಾತ್ರ ಕ್ರೂರ ಆಲೋಚನೆ ಓಡುತ್ತಿತ್ತು.
ಪತ್ನಿ ಪದ್ಮಜಾ ಇತ್ತೀಚೆಗೆ ದಪ್ಪಗಾಗುತ್ತಿರುವುದು ಕಿರಣ್‌ಗೆ ಇಷ್ಟವಿರಲಿಲ್ಲ. “ಜಂಕ್ ಫುಡ್ ತಿನ್ನುವುದರಿಂದಲೇ ಇವಳು ದಪ್ಪಗಾಗುತ್ತಿದ್ದಾಳೆ” ಎಂದು ಪದೇ ಪದೇ ಕೋಪ ಮಾಡಿಕೊಳ್ಳುತ್ತಿದ್ದ ಅವನು, ಕೊನೆಗೆ ಅವಳನ್ನು ಸಾಯಿಸಲು ನಿರ್ಧರಿಸಿದ.
ಗೂಗಲ್‌ನಲ್ಲಿ ಕೊಲೆಗೆ ಪ್ಲ್ಯಾನ್:
ಕೊಲೆ ಮಾಡಲು ಕಿರಣ್ ಸಿನಿಮಾದಂತೆ ಸ್ಕೆಚ್ ಹಾಕಿದ್ದ. “ಹೆಂಡತಿಯನ್ನು ಕೊಲ್ಲುವುದು ಹೇಗೆ?” ಎಂದು ಗೂಗಲ್‌ನಲ್ಲಿ ಹುಡುಕಾಡಿದ್ದ.
80 ಸಾವಿರದ ವಿಷ: ಇಂಟರ್ನೆಟ್‌ನಲ್ಲಿ ಮಾಹಿತಿ ಪಡೆದ ಈತ, ಹೊರರಾಜ್ಯದಿಂದ ಬರೋಬ್ಬರಿ 80,000 ರೂಪಾಯಿ ಕೊಟ್ಟು ವಿಷ ತರಿಸಿಕೊಂಡಿದ್ದ.
ಸಿಹಿಯಲ್ಲಿ ವಿಷ: ಏಪ್ರಿಲ್ 29ರಂದು ವಿಷದ ಪಾರ್ಸೆಲ್ ಬಂದ ತಕ್ಷಣ, ಪತ್ನಿಗೆ ಇಷ್ಟವಾದ ಪಾಲಕೋವದಲ್ಲಿ ಅದನ್ನು ಬೆರೆಸಿ ಕೊಟ್ಟಿದ್ದಾನೆ.
ಉಸಿರುಗಟ್ಟಿಸಿ ಕೊಲೆ: ಪದ್ಮಜಾ ವಿಷದ ಅಮಲಿನಲ್ಲಿ ಪ್ರಜ್ಞೆ ತಪ್ಪುತ್ತಿದ್ದಂತೆ, ದಿಂಬಿನಿಂದ ಮುಖ ಒತ್ತಿ ಹಿಡಿದು ಅವಳನ್ನು ಕೊಂದಿದ್ದಾನೆ. ಅವಳು ಸತ್ತ ಮೇಲೆ ಮೂರು ಗಂಟೆಗಳ ಕಾಲ ಹೆಣದ ಪಕ್ಕದಲ್ಲೇ ಕುಳಿತಿದ್ದ ಈತ, ಆಮೇಲೆ “ಹೆಂಡತಿಗೆ ಹಾರ್ಟ್ ಅಟ್ಯಾಕ್ ಆಗಿದೆ” ಎಂದು ನಾಟಕವಾಡಿದ್ದ.
ಪೊಲೀಸರ ತನಿಖೆ:
ಪದ್ಮಜಾ ಸಾವಿನ ಬಗ್ಗೆ ಸಂಶಯ ಬಂದ ಪೊಲೀಸರು ಮರಣೋತ್ತರ ಪರೀಕ್ಷೆ ಮಾಡಿಸಿದಾಗ, ವಿಷ ಸೇವಿಸಿರುವುದು ಮತ್ತು ಉಸಿರುಗಟ್ಟಿಸಿರುವುದು ಪತ್ತೆಯಾಗಿದೆ. ಪೊಲೀಸರು ತಮಗೆ ಇರೋ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ, ಹೆಂಡತಿಯ ಅಂದ ಕೆಟ್ಟಿತು ಎಂಬ ಕಾರಣಕ್ಕೆ ತಾನೇ ಕೊಂದಿದ್ದಾಗಿ ಕಿರಣ್ ಒಪ್ಪಿಕೊಂಡಿದ್ದಾನೆ.








