ಶಿವಮೊಗ್ಗ: ರೈತರು ಕೃಷಿಯಲ್ಲಿ ಲಾಭ ಮತ್ತು ಸ್ಥಿರತೆ ಸಾಧಿಸಲು ಕೇವಲ ಒಂದೇ ಬೆಳೆಗೆ ಸೀಮಿತವಾಗದೆ ಬಹುಬೆಳೆ ಬೇಸಾಯದತ್ತ ಆಸಕ್ತಿ ತೋರಬೇಕು. ಜೊತೆಗೆ ವೈಜ್ಞಾನಿಕವಾಗಿ ಸಮತೋಲಿತ ರಸಗೊಬ್ಬರಗಳನ್ನು ಬಳಸುವ ಮೂಲಕ ಕೃಷಿಯಲ್ಲಿ ಮೇಲುಗೈ ಸಾಧಿಸಬೇಕು ಎಂದು ಸಾಗರ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್ ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಸಾಮರ್ಥ್ಯ ಸೌಧದಲ್ಲಿ ಕೃಷಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಸಮತೋಲಿತ ರಸಗೊಬ್ಬರ ಬಳಕೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರೈತರ ಆತ್ಮಸ್ಥೈರ್ಯ ಹೆಚ್ಚಿಸುವ ಅಗತ್ಯ
ಪ್ರಸ್ತುತ ಕೃಷಿ ಕ್ಷೇತ್ರ ಎದುರಿಸುತ್ತಿರುವ ಸಂಕೀರ್ಣ ಸವಾಲುಗಳಿಂದಾಗಿ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಈ ಹಂತದಲ್ಲಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು ಎಂದು ವಿರೇಶ್ ಕುಮಾರ್ ಪ್ರತಿಪಾದಿಸಿದರು. ತಾಲ್ಲೂಕಿನ ರಸಗೊಬ್ಬರ ಮತ್ತು ಬಿತ್ತನೆ ಬೀಜದ ಅಂಗಡಿಗಳು ರೈತರ ಬೇಡಿಕೆಗೆ ಸರಿಯಾಗಿ ಸ್ಪಂದಿಸಬೇಕು. ಸರ್ಕಾರದ ನಿಯಮಾವಳಿಗಳ ಪ್ರಕಾರವೇ ಗುಣಮಟ್ಟದ ಕೃಷಿ ಸಾಮಗ್ರಿಗಳನ್ನು ಪೂರೈಕೆ ಮಾಡಬೇಕು. ಕೃಷಿ ಇಲಾಖೆ ಆಯೋಜಿಸುವ ಇಂತಹ ತರಬೇತಿ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ರೈತರಿಗೆ ತಾಂತ್ರಿಕವಾಗಿ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ತರಬೇತಿಗಳಿಂದ ಯಶಸ್ವಿ ಕೃಷಿ ಸಾಧ್ಯ
ಸಾಗರ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಬಿ.ಎಲ್. ಶಿವಪ್ರಕಾಶ್ ಮಾತನಾಡಿ, “ರೈತರು ಕಾಲಕಾಲಕ್ಕೆ ಕೃಷಿ ಇಲಾಖೆ ನೀಡುವ ತರಬೇತಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಯಶಸ್ವಿ ಕೃಷಿಕರಾಗಬೇಕು. ಮಣ್ಣಿನ ಆರೋಗ್ಯದ ದೃಷ್ಟಿಯಿಂದ ಸಮತೋಲಿತ ಗೊಬ್ಬರ ಬಳಸುವುದು ಅತ್ಯಗತ್ಯ. ಇದರಿಂದ ಭೂಮಿಯ ಫಲವತ್ತತೆ ಉಳಿಯುವುದಲ್ಲದೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ,” ಎಂದು ಸಲಹೆ ನೀಡಿದರು.
ಈ ವೇದಿಕೆಯಲ್ಲಿ ಕೃಷಿಕ್ ಸಮಾಜದ ಅಧ್ಯಕ್ಷ ವಿ.ವಿ. ಶ್ರೀಧರ್, ಕಾರ್ಯದರ್ಶಿ ಗಣಪತಿ ಹೆನಗೆರೆ, ಪ್ರಮುಖರಾದ ಸಿ.ಆರ್. ವೀರಪ್ಪ, ನಿಂಗನಗೌಡ, ಕೃಷಿ ಅಧಿಕಾರಿ ಲೋಕೇಶ್ ಮತ್ತು ರವೀಂದ್ರ ಸೇರಿದಂತೆ ಹಲವರು ಹಾಜರಿದ್ದರು. ವಿನಾಯಕ ರಾವ್ ಬೇಳೂರು ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
BREAKING: ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆ 38ಕ್ಕೆ ಏರಿಕೆ: ಕೇಂದ್ರ ಸಚಿವ ಸಂಪುಟದ ಮಹತ್ವದ ನಿರ್ಧಾರ
ಚರ್ನೋಬಿಲ್ ಕಣ್ಣೆದುರಿಗಿದೆ, ಕೈಗಾ ಹೋರಾಟದ ವಿಫಲತೆ ಬೇಸೂರಿನಲ್ಲಿ ಮರುಕಳಿಸದಿರಲಿ: ಎಚ್.ಬಿ.ರಾಘವೇಂದ್ರ








