ಚಂಡೀಗಢ:ಚಂಡೀಗಢ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವೊಂದರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಮಾನದ ಒಳಗಿದ್ದ ಪವರ್ ಬ್ಯಾಂಕ್ ಒಂದರಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಪ್ರಯಾಣಿಕರನ್ನು ತುರ್ತಾಗಿ ಕೆಳಗಿಳಿಸಲಾಯಿತು.
ಇಂಡಿಗೋ ಸಂಸ್ಥೆಯ ಈ ವಿಮಾನವು ಟೇಕ್-ಆಫ್ಗೆ ಸಿದ್ಧವಾಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಪ್ರಯಾಣಿಕರೊಬ್ಬರ ಬ್ಯಾಗ್ನಲ್ಲಿದ್ದ ಪವರ್ ಬ್ಯಾಂಕ್ನಲ್ಲಿ ಹಠಾತ್ ಕಿಡಿ ಕಾಣಿಸಿಕೊಂಡು ಬೆಂಕಿ ಹತ್ತಿಕೊಂಡಿದೆ. ಇದನ್ನು ಗಮನಿಸಿದ ವಿಮಾನದ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು.
ಯಾವುದೇ ಅಪಾಯ ಸಂಭವಿಸಬಾರದೆಂಬ ಉದ್ದೇಶದಿಂದ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ತುರ್ತು ನಿರ್ಗಮನದ ಮೂಲಕ ಸುರಕ್ಷಿತವಾಗಿ ಹೊರತಂದರು. ಈ ಘಟನೆಯಿಂದಾಗಿ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಗೊಂದಲ ಮತ್ತು ಆತಂಕದ ವಾತಾವರಣ ಉಂಟಾಗಿತ್ತು.
ಅದೃಷ್ಟವಶಾತ್, ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಅಥವಾ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಬೆಂಕಿಯನ್ನು ತಕ್ಷಣವೇ ನಂದಿಸಲಾಗಿದ್ದು, ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ತಾಂತ್ರಿಕ ತಪಾಸಣೆಯ ನಂತರ ವಿಮಾನದ ಮುಂದಿನ ಪ್ರಯಾಣದ ಬಗ್ಗೆ ಕ್ರಮ ಕೈಗೊಳ್ಳಲಾಯಿತು.








