ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯದ ವಿವಿಧೆಡೆ ರಾಜಕೀಯ ಹಿಂಸಾಚಾರ ನಡೆಯಬಹುದು ಎಂಬ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು (CAPF) ತಕ್ಷಣವೇ ವಾಪಸ್ ಕರೆಯಿಸಿಕೊಳ್ಳದೆ, ರಾಜ್ಯದಲ್ಲೇ ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ನಿರ್ಧರಿಸಿದೆ.
ಕಳೆದ 2021ರ ಚುನಾವಣೆಯ ನಂತರ ನಡೆದಿದ್ದ ಭೀಕರ ಹಿಂಸಾಚಾರದ ಕಹಿ ನೆನಪುಗಳ ಹಿನ್ನೆಲೆಯಲ್ಲಿ, ಈ ಬಾರಿ ಅಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಸುಮಾರು 70,000 ಕೇಂದ್ರ ಭದ್ರತಾ ಸಿಬ್ಬಂದಿ (700 ಕಂಪನಿಗಳು) ಮುಂದಿನ ಕೆಲವು ವಾರಗಳ ಕಾಲ ಬಂಗಾಳದ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ನಡೆಸಲಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಹಿಂದೆಯೇ ಘೋಷಿಸಿದಂತೆ, ಅಹಿತಕರ ಘಟನೆಗಳನ್ನು ತಡೆಯಲು ಮತ್ತು ಮತದಾರರಲ್ಲಿ ಧೈರ್ಯ ತುಂಬಲು ಭದ್ರತಾ ಪಡೆಗಳು ಸುಮಾರು 60 ದಿನಗಳ ಕಾಲ ರಾಜ್ಯದಲ್ಲಿ ಇರಲಿವೆ.
ವಿಶೇಷವಾಗಿ ಬಿರ್ಭೂಮ್, ಉತ್ತರ 24 ಪರಗಣ ಮತ್ತು ನಂದಿಗ್ರಾಮದಂತಹ ರಾಜಕೀಯವಾಗಿ ಸೂಕ್ಷ್ಮವಾಗಿರುವ ಜಿಲ್ಲೆಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.








