ನವದೆಹಲಿ: ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಪ್ರದರ್ಶನವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ವಿಶ್ವದಾದ್ಯಂತ ಅಸ್ಥಿರತೆ ತಾಂಡವವಾಡುತ್ತಿರುವ ಈ ಸಮಯದಲ್ಲಿ ಭಾರತದ ಮತದಾರರು ‘ಸ್ಥಿರ ಮತ್ತು ಸದೃಢ’ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ, ಮತದಾರರ ಪಕ್ವತೆಯನ್ನು ಕೊಂಡಾಡಿದರು:
”ಇಂದು ಇಡೀ ಜಗತ್ತು ಅನಿಶ್ಚಿತತೆ ಮತ್ತು ಅಸ್ಥಿರತೆಯ ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತದ ಜನರು ಅಭಿವೃದ್ಧಿ ಮತ್ತು ಸ್ಥಿರತೆಯನ್ನು ಬಯಸಿದ್ದಾರೆ. ಈ ಫಲಿತಾಂಶಗಳು ಕೇವಲ ಪಕ್ಷದ ಗೆಲುವಲ್ಲ, ಬದಲಿಗೆ ಭಾರತದ ಪ್ರಜಾಪ್ರಭುತ್ವದ ಮೇಲಿರುವ ಜನರ ಅಚಲ ನಂಬಿಕೆಯ ವಿಜಯವಾಗಿದೆ.”
ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಮತ್ತು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರಕ್ಕೆ ಮತದಾರರು ಮುದ್ರೆ ಒತ್ತಿದ್ದಾರೆ ಎಂದು ಮೋದಿ ತಿಳಿಸಿದರು.ನಕಾರಾತ್ಮಕ ರಾಜಕೀಯ ಮತ್ತು ವಿಭಜಕ ತಂತ್ರಗಳನ್ನು ಜನರು ತಿರಸ್ಕರಿಸಿದ್ದಾರೆ. ಅಭಿವೃದ್ಧಿ ಪರ ರಾಜಕಾರಣ ಮಾತ್ರ ದೇಶವನ್ನು ಮುನ್ನಡೆಸಬಲ್ಲದು ಎಂಬುದು ಸಾಬೀತಾಗಿದೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಐತಿಹಾಸಿಕ ಮುನ್ನಡೆ ಮತ್ತು ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವನ್ನು ಪ್ರಜಾಪ್ರಭುತ್ವದ ವಿಭಿನ್ನ ಆಯಾಮಗಳೆಂದು ಅವರು ಬಣ್ಣಿಸಿದರು.








