ಬೆಲೊ ಹೊರಿಜಾಂಟೆ (ಬ್ರೆಜಿಲ್): ಬ್ರೆಜಿಲ್‌ನ ಆಗ್ನೇಯ ನಗರವಾದ ಬೆಲೊ ಹೊರಿಜಾಂಟೆಯಲ್ಲಿ ಸಣ್ಣ ವಿಮಾನವೊಂದು ಜನವಸತಿ ಕಟ್ಟಡಕ್ಕೆ ಡಿಕ್ಕಿ ಹೊಡೆದು ಪತನಗೊಂಡಿದೆ. ಈ ಭೀಕರ ಘಟನೆಯಲ್ಲಿ ಪೈಲಟ್ ಮತ್ತು ಸಹ-ಪೈಲಟ್ ಸೇರಿದಂತೆ ಒಟ್ಟು ಮೂವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಐವರು ಪ್ರಯಾಣಿಕರಿದ್ದ ಸಿಂಗಲ್ ಇಂಜಿನ್ ವಿಮಾನವು ಪಾಂಪುಲ್ಹಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ನಿಯಂತ್ರಣ ತಪ್ಪಿ ಮೂರು ಅಂತಸ್ತಿನ ವಸತಿ ಸಮುಚ್ಚಯದ ಮೆಟ್ಟಿಲುಗಳ ಭಾಗಕ್ಕೆ ಅಪ್ಪಳಿಸಿದೆ.
ಅಪಘಾತದ ಸ್ಥಳದಲ್ಲೇ ಪೈಲಟ್ ಮತ್ತು ಸಹ-ಪೈಲಟ್ ಸಾವನ್ನಪ್ಪಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಪ್ರಯಾಣಿಕರಲ್ಲಿ ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉಳಿದ ಇಬ್ಬರ ಸ್ಥಿತಿ ಗಂಭೀರವಾಗಿದೆ.
ವಿಮಾನವು ಕಟ್ಟಡದ ಮೆಟ್ಟಿಲುಗಳ ಭಾಗಕ್ಕೆ ಅಪ್ಪಳಿಸಿದ್ದರಿಂದ, ಅಪಾರ್ಟ್‌ಮೆಂಟ್‌ನಲ್ಲಿದ್ದ ನಿವಾಸಿಗಳಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅಗ್ನಿಶಾಮಕ ದಳ ತಿಳಿಸಿದೆ.ವಿಮಾನವು ಕಟ್ಟಡಗಳ ಮೇಲೆ ತೀರಾ ಕೆಳಮಟ್ಟದಲ್ಲಿ ಹಾರುತ್ತಾ ಸಾಗಿ, ನಂತರ ದಿಢೀರನೆ ಕಟ್ಟಡಕ್ಕೆ ಅಪ್ಪಳಿಸಿ ಸ್ಫೋಟಗೊಳ್ಳುವ ದೃಶ್ಯಗಳು ಸುದ್ದಿ ಹೆಲಿಕಾಪ್ಟರ್ ಮತ್ತು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
A plane slammed into a building in Belo Horizonte, Brazil. pic.twitter.com/H7vhULaCfQ
— Open Source Intel (@Osint613) May 4, 2026








