ಚೆನ್ನೈ: ತಮಿಳುನಾಡು ರಾಜಕೀಯದ ಇತಿಹಾಸದಲ್ಲಿ ಇಂದು ಅಭೂತಪೂರ್ವ ತಿರುವು ಕಂಡುಬಂದಿದೆ. ಚಿತ್ರರಂಗದಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ರಾಜ್ಯದ ಪ್ರಬಲ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಡಿಎಂಕೆಗೆ ಭರ್ಜರಿ ಶಾಕ್ ನೀಡಿದೆ. ಚೊಚ್ಚಲ ಚುನಾವಣೆಯಲ್ಲೇ ವಿಜಯ್ ಅಬ್ಬರದ ಪ್ರದರ್ಶನ ನೀಡುವ ಮೂಲಕ ತಮಿಳುನಾಡಿನ ರಾಜಕೀಯ ಸಮೀಕರಣವನ್ನೇ ಬದಲಿಸಿದ್ದಾರೆ.
ಮುಖ್ಯಮಂತ್ರಿ ಸ್ಟಾಲಿನ್ಗೆ ಮುಖಭಂಗ ಈ ಬಾರಿಯ ಚುನಾವಣೆಯ ಅತ್ಯಂತ ದೊಡ್ಡ ಅಚ್ಚರಿ ಎಂದರೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಸೋಲು. ತಮ್ಮ ಭದ್ರಕೋಟೆಯೆಂದೇ ಪರಿಗಣಿಸಲ್ಪಟ್ಟಿದ್ದ ಕೊಳತ್ತೂರು ಕ್ಷೇತ್ರದಲ್ಲಿ ಸ್ಟಾಲಿನ್ ಅವರು ಪರಾಜಯಗೊಂಡಿದ್ದಾರೆ. ವಿಜಯ್ ಅವರ TVK ಪಕ್ಷದ ಅಭ್ಯರ್ಥಿ ವಿ.ಎಸ್. ಬಾಬು ಅವರು ಸ್ಟಾಲಿನ್ ವಿರುದ್ಧ ಐತಿಹಾಸಿಕ ಜಯ ಸಾಧಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ. ಇದು ಡಿಎಂಕೆ ಪಾಲಿಗೆ ಜೀರ್ಣಿಸಿಕೊಳ್ಳಲಾಗದ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.
ಚೆಪಾಕ್ನಲ್ಲಿ ಉದಯನಿಧಿ ಭರ್ಜರಿ ಜಯ ಒಂದೆಡೆ ಸ್ಟಾಲಿನ್ ಸೋಲನುಭವಿಸಿದ್ದರೆ, ಮತ್ತೊಂದೆಡೆ ಅವರ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಅವರು ತಮ್ಮ ವರ್ಚಸ್ಸನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಚೆನ್ನೈನ ಚೆಪಾಕ್-ತಿರುವಳ್ಳಿಕೇಣಿ ಕ್ಷೇತ್ರದಲ್ಲಿ ಉದಯನಿಧಿ ಸ್ಟಾಲಿನ್ ಅವರು ಭರ್ಜರಿ ಜಯ ದಾಖಲಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿಯಾಗಿದ್ದ TVK ಪಕ್ಷದ ಅಭ್ಯರ್ಥಿ ಸೆಲ್ವಂ ವಿರುದ್ಧ ದೊಡ್ಡ ಅಂತರದ ಗೆಲುವು ಸಾಧಿಸುವ ಮೂಲಕ ಉದಯನಿಧಿ ಕ್ಷೇತ್ರದಲ್ಲಿ ತಮ್ಮ ಪಾರಮ್ಯವನ್ನು ಮೆರೆದಿದ್ದಾರೆ.







