ವಾಷಿಂಗ್ಟನ್:ಅಮೆರಿಕ ಮತ್ತು ಇರಾನ್ ನಡುವಿನ ದೀರ್ಘಕಾಲದ ಸಂಘರ್ಷಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಇರಾನ್ ಸಲ್ಲಿಸಿದ್ದ ಇತ್ತೀಚಿನ ಪ್ರಸ್ತಾವನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಡಾಖಂಡಿತವಾಗಿ ತಿರಸ್ಕರಿಸಿದ್ದಾರೆ. ಇರಾನ್ ನೀಡಿದ ಈ ಕೊಡುಗೆಯು “ಸ್ವೀಕಾರಾರ್ಹವಲ್ಲ” ಎಂದು ಟ್ರಂಪ್ ಹೇಳಿರುವುದಾಗಿ ಇಸ್ರೇಲ್ನ ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ ತನ್ನ ಮೇಲಿನ ಆರ್ಥಿಕ ದಿಗ್ಬಂಧನಗಳನ್ನು ಸಡಿಲಗೊಳಿಸುವ ಬದಲಾಗಿ ತನ್ನ ಪರಮಾಣು ಕಾರ್ಯಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದಾಗಿ ಪ್ರಸ್ತಾಪಿಸಿತ್ತು ಎನ್ನಲಾಗಿದೆ.
ಪ್ರಸ್ತಾವನೆಯು ಅಮೆರಿಕದ ಹಿತಾಸಕ್ತಿಗಳಿಗೆ ಪೂರಕವಾಗಿಲ್ಲ ಮತ್ತು ಇದು ಕೇವಲ ಕಣ್ಣೊರೆಸುವ ತಂತ್ರ ಎಂದು ಟ್ರಂಪ್ ಭಾವಿಸಿದ್ದಾರೆ. ಇರಾನ್ನಿಂದ ಇನ್ನೂ ಹೆಚ್ಚಿನ ಕಠಿಣ ನಿಯಮಗಳ ಪಾಲನೆಯನ್ನು ಅವರು ನಿರೀಕ್ಷಿಸುತ್ತಿದ್ದಾರೆ.
ಟ್ರಂಪ್ ಅವರ ಈ ಕಠಿಣ ನಿಲುವನ್ನು ಇಸ್ರೇಲ್ ಸ್ವಾಗತಿಸಿದ್ದು, ಇರಾನ್ನ ಅಣುಶಕ್ತಿಯನ್ನು ಸಂಪೂರ್ಣವಾಗಿ ನಿಯಂತ್ರಿಸುವುದೊಂದೇ ಶಾಂತಿಗೆ ಇರುವ ದಾರಿ ಎಂದು ಪ್ರತಿಪಾದಿಸಿದೆ.








