ಬೆಂಗಳೂರು: ರಾಜ್ಯ ಸರ್ಕಾರಿ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ನಿರುದ್ಯೋಗಿಗಳಿಗೆ ದೊಡ್ಡ ಮಟ್ಟದ ಶುಭಸುದ್ದಿ ಸಿಕ್ಕಿದೆ. ರಾಜ್ಯಾದ್ಯಂತ ಖಾಲಿ ಇರುವ ಒಟ್ಟು 56,432 ಹುದ್ದೆಗಳ ನೇಮಕಾತಿಗೆ ಸರ್ಕಾರ ಮುಂದಾಗಿದ್ದು, ಇದರಲ್ಲಿ ಸಿಂಹಪಾಲು ಅಂದರೆ 32,132 ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗಕ್ಕೇ ಮೀಸಲಾಗಿವೆ.
ರಾಜ್ಯ ಸರ್ಕಾರವು ಒಟ್ಟು 56,432 ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದೆ. ಪ್ರಾದೇಶಿಕ ಅಸಮಾನತೆ ನಿವಾರಿಸಲು ಹಾಗೂ ವಿಶೇಷ ಸ್ಥಾನಮಾನದ ಹಿನ್ನೆಲೆಯಲ್ಲಿ, ಒಟ್ಟು ಹುದ್ದೆಗಳಲ್ಲಿ 32,132 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಲಾಗಿದೆ.ಕಿತ್ತೂರು ಕರ್ನಾಟಕ, ಕರಾವಳಿ ಮತ್ತು ಹಳೆ ಮೈಸೂರು ಭಾಗಗಳಿಗೆ ಒಟ್ಟು 24,300 ಹುದ್ದೆಗಳನ್ನು ನಿಗದಿಪಡಿಸಲಾಗಿದೆ.
ಖಾಲಿ ಇರುವ ಹುದ್ದೆಗಳ ಪೈಕಿ ಶೇ. 80 ರಷ್ಟು ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಲು ಸಚಿವ ಸಂಪುಟ ಉಪಸಮಿತಿಯು ಸೂಚನೆ ನೀಡಿದೆ.
ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು? (ಕಲ್ಯಾಣ ಕರ್ನಾಟಕ ಭಾಗಕ್ಕೆ):
ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿವಿಧ ಇಲಾಖೆಗಳ ಅಡಿಯಲ್ಲಿ ಹುದ್ದೆಗಳ ಹಂಚಿಕೆ ಈ ಕೆಳಗಿನಂತಿದೆ:
ಶಿಕ್ಷಣ ಇಲಾಖೆ: 10,807
ನಗರಾಭಿವೃದ್ಧಿ: 3,080
ಸಾರಿಗೆ ಇಲಾಖೆ: 2,909
ಇಂಧನ ಇಲಾಖೆ: 2,645
ವೈದ್ಯಕೀಯ ಶಿಕ್ಷಣ: 2,219
ಗೃಹ ಇಲಾಖೆ: 1,402
ಆರೋಗ್ಯ ಇಲಾಖೆ: 1,104
ಆರ್ಥಿಕ ಇಲಾಖೆ: 841
ಕೃಷಿ ಇಲಾಖೆ: 810
ದಶಕಗಳಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಈ ನೇಮಕಾತಿ ಪ್ರಕ್ರಿಯೆಯು ಹೊಸ ಭರವಸೆಯನ್ನು ನೀಡಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.








