ಚಂಡೀಗಢ:ವೈದ್ಯಕೀಯ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ಭಾರತೀಯ ಸೇನೆಯ ಕಮಾಂಡ್ ಆಸ್ಪತ್ರೆ, ಚಂಡೀಗಢದಿಂದ ದೆಹಲಿಗೆ ಕೇವಲ 81 ನಿಮಿಷಗಳಲ್ಲಿ ಹೃದಯವೊಂದನ್ನು ವಿಮಾನದ ಮೂಲಕ ರವಾನಿಸಿ, 13 ವರ್ಷದ ಸುಡಾನ್ ಬಾಲಕನಿಗೆ ಯಶಸ್ವಿಯಾಗಿ ಹೃದಯ ಕಸಿ ಮಾಡಿದೆ.
ಚಂಡೀಗಢದ ಕಮಾಂಡ್ ಆಸ್ಪತ್ರೆಯಲ್ಲಿ ಮಿದುಳು ಸಾವು (Brain Dead) ಸಂಭವಿಸಿದ ವ್ಯಕ್ತಿಯೊಬ್ಬರ ಕುಟುಂಬದವರು ಹೃದಯ ದಾನ ಮಾಡಲು ಒಪ್ಪಿಗೆ ನೀಡಿದ್ದರು.ದೆಹಲಿಯ ಆರ್ಮಿ ಹಾಸ್ಪಿಟಲ್ (ರಿಸರ್ಚ್ ಆಂಡ್ ರೆಫರಲ್) ನಲ್ಲಿ ದಾಖಲಾಗಿದ್ದ ಸುಡಾನ್ ದೇಶದ 13 ವರ್ಷದ ಬಾಲಕನಿಗೆ ತುರ್ತಾಗಿ ಹೃದಯ ಕಸಿ ಮಾಡುವ ಅಗತ್ಯವಿತ್ತು.
ವಾಯುಮಾರ್ಗದ ಪ್ರಯಾಣ: ಹೃದಯವನ್ನು ವಿಶೇಷ ಪೆಟ್ಟಿಗೆಯಲ್ಲಿ ಇರಿಸಿ, ಭಾರತೀಯ ವಾಯುಪಡೆಯ ವಿಮಾನದ ಮೂಲಕ ಅತ್ಯಂತ ವೇಗವಾಗಿ ದೆಹಲಿಗೆ ತಲುಪಿಸಲಾಯಿತು.ಚಂಡೀಗಢ ವಿಮಾನ ನಿಲ್ದಾಣ ಮತ್ತು ದೆಹಲಿ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ತಲುಪಲು ಸಂಚಾರ ಪೊಲೀಸರು ‘ಗ್ರೀನ್ ಕಾರಿಡಾರ್’ ನಿರ್ಮಿಸಿದ್ದರು. ಇದರಿಂದ ಯಾವುದೇ ಸಂಚಾರ ದಟ್ಟಣೆಯಿಲ್ಲದೆ ಆಂಬ್ಯುಲೆನ್ಸ್ ವೇಗವಾಗಿ ಸಂಚರಿಸಲು ಸಾಧ್ಯವಾಯಿತು.
ದೆಹಲಿಯ ಸೇನಾ ಆಸ್ಪತ್ರೆಯ ತಜ್ಞ ವೈದ್ಯರ ತಂಡವು ಸತತ ಪರಿಶ್ರಮದಿಂದ ಬಾಲಕನಿಗೆ ಹೃದಯ ಕಸಿ ಮಾಡಿದೆ. ಪ್ರಸ್ತುತ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.








