ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ನಡೆಯುತ್ತಿರುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರ ಹೆಲಿಕಾಪ್ಟರ್ ಲ್ಯಾಂಡಿಂಗ್ ವಿಚಾರದಲ್ಲಿ ಪೈಲಟ್ ಮಾಡಿದ ಸಣ್ಣ ಎಡವಟ್ಟು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಲ್ಲಿ ಕೆಲಕಾಲ ಆತಂಕ ಮತ್ತು ಗೊಂದಲ ಮೂಡಿಸಿದ ಘಟನೆ ನಡೆದಿದೆ.
ನಡೆದಿದ್ದೇನು?
ಸಿಂಧನೂರಿನ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಒಂದೇ ಕಡೆ ಮೂರು ಹೆಲಿಪ್ಯಾಡ್‌ಗಳನ್ನು ಸಿದ್ಧಪಡಿಸಲಾಗಿತ್ತು. ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನಟ ಕಿಚ್ಚ ಸುದೀಪ್ ಅವರು ಪ್ರತ್ಯೇಕ ಹೆಲಿಕಾಪ್ಟರ್‌ಗಳಲ್ಲಿ ಆಗಮಿಸಿದ್ದರು. ಈ ವೇಳೆ ಸುದೀಪ್ ಅವರಿದ್ದ ಹೆಲಿಕಾಪ್ಟರ್‌ನ ಪೈಲಟ್, ತಮಗೆ ನಿಗದಿಪಡಿಸಿದ್ದ ಹೆಲಿಪ್ಯಾಡ್ ಬಿಟ್ಟು, ಡಿ.ಕೆ. ಶಿವಕುಮಾರ್ ಅವರು ಇಳಿಯಬೇಕಿದ್ದ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದರು.
ಅಧಿಕಾರಿಗಳ ಆತಂಕ:
ಗಣ್ಯರ ಸುರಕ್ಷತೆ ಮತ್ತು ಶಿಷ್ಟಾಚಾರದ (Protocol) ದೃಷ್ಟಿಯಿಂದ ನಿಗದಿತ ಹೆಲಿಪ್ಯಾಡ್‌ನಲ್ಲಿಯೇ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ ಸ್ಥಳ ಬದಲಾವಣೆಯಿಂದಾಗಿ ತಬ್ಬಿಬ್ಬಾದ ಪೊಲೀಸ್ ಅಧಿಕಾರಿಗಳು ತಕ್ಷಣವೇ ಪೈಲಟ್ ಅತಾರಾಟೆ ತೆಗೆದುಕೊಂಡರು. ನಂತರ ಅಧಿಕಾರಿಗಳ ಸೂಚನೆ ಮೇರೆಗೆ ಹೆಲಿಕಾಪ್ಟರ್ ಅನ್ನು ಪುನಃ ಮೇಲೆಬ್ಬಿಸಿ, ನಿಗದಿಪಡಿಸಿದ ಸರಿಯಾದ ಹೆಲಿಪ್ಯಾಡ್‌ನಲ್ಲಿ ಲ್ಯಾಂಡ್ ಮಾಡಿಸಲಾಯಿತು.
ಮರುಕಳಿಸಿದ ಗೊಂದಲ:
ಈ ಹಿಂದೆ ಲಿಂಗಸೂಗೂರಿನಲ್ಲಿ ಮುಖ್ಯಮಂತ್ರಿಗಳ ಹೆಲಿಕಾಪ್ಟರ್ ಕೂಡ ಇಂತಹುದೇ ಗೊಂದಲಕ್ಕೆ ಒಳಗಾಗಿ ಬೇರೆಡೆ ಲ್ಯಾಂಡ್ ಆಗಿತ್ತು. ಈಗ ಸಿಂಧನೂರಿನಲ್ಲಿ ಡಿಸಿಎಂ ಹಾಗೂ ಸುದೀಪ್ ಅವರ ಆಗಮನದ ವೇಳೆ ಈ ಘಟನೆ ಮರುಕಳಿಸಿದ್ದು, ಜಿಲ್ಲಾಡಳಿತವನ್ನು ಕೆಲಕಾಲ ಒತ್ತಡಕ್ಕೆ ಸಿಲುಕಿಸಿತು.
ಅದೃಷ್ಟವಶಾತ್, ಯಾವುದೇ ದೊಡ್ಡ ಅನಾಹುತ ಸಂಭವಿಸದೆ ಪರಿಸ್ಥಿತಿ ತಿಳಿಯಾಯಿತು. ನಂತರ ಕಿಚ್ಚ ಸುದೀಪ್ ಅವರು ಹೆಲಿಕಾಪ್ಟರ್‌ನಿಂದ ಇಳಿದು ಅಭಿಮಾನಿಗಳತ್ತ ಕೈಬೀಸುತ್ತಾ ಕಾರ್ಯಕ್ರಮದತ್ತ ಸಾಗಿದರು.
BREAKING: ಡಿಕೆಶಿ, ಕಿಚ್ಚ ಸುದೀಪ್ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ಬೆಂಕಿ ಅವಘಡ: ತಪ್ಪಿದ ಭಾರೀ ದುರಂತ
ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `ಹಾಜರಾತಿ’ ಬಗ್ಗೆ ಇಲ್ಲಿದೆ ಬಿಗ್ ಅಪ್ ಡೇಟ್.!








